ಢಾಕಾ: ಗುರುವಾರವಷ್ಟೇ ಎಲ್ಲಾ ಮಾದರಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಇಂದು ರಾಜೀನಾಮೆ ಹಿಂಪಡೆದಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಮಧ್ಯಪ್ರವೇಶದ ನಂತರ ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ನಿವೃತ್ತಿ ಹಿಂಪಡೆದರು.
34ರ ಹರೆಯದ ತಮೀಮ್ ಏಕದಿನ ವಿಶ್ವಕಪ್ ಗೆ ಕೇವಲ ಮೂರು ತಿಂಗಳ ಇರುವಂತೆ ದಿಢೀರ್ ಎನ್ನುವಂತೆ ಗುರುವಾರ ನಿವೃತ್ತಿ ಘೋಷಿಸಿದ್ದರು. ಚಿತ್ತಗಾಂಗ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಣೆ ಮಾಡಿ ಬೇಸರದಿಂದ ಕಣ್ಣೀರು ಹರಿಸಿದ್ದರು.
ಇಂದು ತಮೀಮ್ ಇಕ್ಬಾಲ್ ಅವರು ಪ್ರಧಾನಿ ಶೇಖ್ ಹಸೀನಾರನ್ನು ಭೇಟಿಯಾದರು. ಅವರು ತಮ್ಮ ಪತ್ನಿ ಆಯೇಷಾ, ಮಾಜಿ ಬಾಂಗ್ಲಾದೇಶದ ನಾಯಕ ಮಶ್ರಫೆ ಮೊರ್ತಜಾ ಮತ್ತು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಅವರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದರು.
ಆದರೆ ತಮೀಮ್ ಇಕ್ಬಾಲ್ ತಕ್ಷಣದಿಂದ ರಾಷ್ಟ್ರೀಯ ತಂಡಕ್ಕೆ ಮರಳುವುದಿಲ್ಲ. ಆಗಸ್ಟ್ 31 ರಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್ ಗೆ ಅವರು ಹಿಂದಿರುಗಲಿದ್ದಾರೆ. ಅಲ್ಲಿಯವರೆಗೆ ಅವರು ಒಂದೂವರೆ ತಿಂಗಳ ವಿರಾಮವನ್ನು ತೆಗೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.