Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ : ತಮಿಳುನಾಡು ಚಾಂಪಿಯನ್‌

11:42 PM Jan 31, 2021 | Team Udayavani |

ಅಹ್ಮದಾಬಾದ್: ಏಕಪಕ್ಷೀಯ ಫೈನಲ್‌ನಲ್ಲಿ ಬರೋಡ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ತಮಿಳುನಾಡು “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ’ ಟಿ20 ಪ್ರಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಳೆದ ವರ್ಷ ಕರ್ನಾಟಕ ವಿರುದ್ಧ ಎಡವಿ ಕೈಜಾರಿದ ಟ್ರೋಫಿಯನ್ನು ಈ ಸಲ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Advertisement

ರವಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಬರೋಡ 9 ವಿಕೆಟಿಗೆ ಕೇವಲ 120 ರನ್‌ ಗಳಿಸಿದರೆ, ತಮಿಳುನಾಡು 18 ಓವರ್‌ಗಳಲ್ಲಿ 3 ವಿಕೆಟಿಗೆ 123 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಇದರೊಂದಿಗೆ ಕೊರೊನೋತ್ತರದ ಪ್ರಥಮ ದೇಶಿ ಕ್ರಿಕೆಟ್‌ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಸುಲಭ ಚೇಸಿಂಗ್‌ ವೇಳೆ ಹರಿ ನಿಶಾಂತ್‌ 35, ಬಾಬಾ ಅಪರಾಜಿತ್‌ ಅಜೇಯ 29, ನಾಯಕ ದಿನೇಶ್‌ ಕಾರ್ತಿಕ್‌ 22, ಶಾರೂಖ್‌ ಖಾನ್‌ ಅಜೇಯ 18 ರನ್‌ ಮಾಡಿದರು.

ಬರೋಡ ಬ್ಯಾಟಿಂಗ್‌ ವೈಫಲ್ಯ
ಮೊದಲು ಬ್ಯಾಟಿಂಗ್‌ ಮಾಡಿದ ಬರೋಡ ಫೈನಲ್‌ ಪಂದ್ಯದ ಜೋಶ್‌ ತೋರಲೇ ಇಲ್ಲ. ತಮಿಳುನಾಡಿನ ಬಿಗಿಯಾದ ಬೌಲಿಂಗ್‌ ದಾಳಿಗೆ ತತ್ತರಿಸಿ ರನ್ನಿಗಾಗಿ ಪರದಾಡತೊಡಗಿತು. ಅದರಲ್ಲೂ ಎಡಗೈ ಸ್ಪಿನ್ನರ್‌ ಮಣಿಮಾರನ್‌ ಸಿದ್ಧಾರ್ಥ್ ಘಾತಕ ದಾಳಿ ಸಂಘಟಿಸಿ ಬರೋಡವನ್ನು ಕಟ್ಟಿಹಾಕಿದರು. ಸಿದ್ಧಾರ್ಥ್ ಸಾಧನೆ 20 ರನ್ನಿಗೆ 4 ವಿಕೆಟ್‌.

ಬೌಲಿಂಗ್‌ ಆರಂಭಿಸಿದ ಮತ್ತೋರ್ವ ಸ್ಪಿನ್ನರ್‌ ಆರ್‌. ಸಾಯಿ ಕಿಶೋರ್‌ ಅವರಂತೂ ಅತ್ಯಂತ ಮಿತವ್ಯಯ ಸಾಧನೆಯಿಂದ ಗಮನ ಸೆಳೆದರು. ವಿಕೆಟ್‌ ಉರುಳಿಸುವಲ್ಲಿ ವಿಫಲರಾದರೂ ಅವರು 4 ಓವರ್‌ಗಳಲ್ಲಿ ನೀಡಿದ್ದು 11 ರನ್‌ ಮಾತ್ರ. ಇದರಲ್ಲಿ ಒಂದು ಓವರ್‌ ಮೇಡನ್‌ ಆಗಿತ್ತು. 9 ಓವರ್‌ ಮುಗಿಯುವಷ್ಟರಲ್ಲಿ ಬರೋಡದ 6 ವಿಕೆಟ್‌ ಬರೀ 36 ರನ್ನಿಗೆ ಹಾರಿ ಹೋಗಿತ್ತು. ಸ್ಕೋರ್‌ ನೂರರ ಗಡಿ ದಾಟುವುದೂ ಅನುಮಾನ ಎಂಬ ಸ್ಥಿತಿ ಇತ್ತು. ಆದರೆ ವನ್‌ಡೌನ್‌ ಬ್ಯಾಟ್ಸ್‌ಮನ್‌ ವಿಷ್ಣು ಸೋಲಂಕಿ ಅಂತಿಮ ಓವರ್‌ ತನಕ ತಮಿಳುನಾಡು ಬೌಲಿಂಗ್‌ ಆಕ್ರಮಣವನ್ನು ತಡೆದು ನಿಂತರು; 55 ಎಸೆತಗಳಿಂದ 49 ರನ್‌ ಹೊಡೆದು ತಂಡದ ಮೊತ್ತವನ್ನು 120ರ ತನಕ ವಿಸ್ತರಿಸಲು ಯಶಸ್ವಿಯಾದರು. ಕೆಳ ಕ್ರಮಾಂಕದಲ್ಲಿ ಆಡಲಿಳಿದ ಅತೀತ್‌ ಶೇಥ್‌ 29 ರನ್‌ ಮಾಡಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಬರೋಡ-9 ವಿಕೆಟಿಗೆ 120 (ಸೋಲಂಕಿ 49, ಶೇಥ್‌ 29, ದೇವಧರ್‌ 16, ಸಿದ್ಧಾರ್ಥ್ 20ಕ್ಕೆ 4). ತಮಿಳುನಾಡು-18 ಓವರ್‌ಗಳಲ್ಲಿ 3 ವಿಕೆಟಿಗೆ 123 (ನಿಶಾಂತ್‌ 35, ಅಪರಾಜಿತ್‌ ಔಟಾಗದೆ 29, ದಿನೇಶ್‌ ಕಾರ್ತಿಕ್‌ 22).

ವಿಜಯ್‌ ಹಜಾರೆ: ಮುಂಬಯಿ ಸಂಭಾವ್ಯ ತಂಡದಲ್ಲಿ ಅರ್ಜುನ್‌
ಮುಂಬಯಿ: ವಿಜಯ್‌ ಹಜಾರೆ ಏಕದಿನ ಸರಣಿಗಾಗಿ ಮುಂಬಯಿ 104 ಆಟಗಾರರ ಬೃಹತ್‌ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಅರ್ಜುನ್‌ ತೆಂಡುಲ್ಕರ್‌ ಕೂಡ ಕಾಣಿಸಿಕೊಂಡಿದ್ದಾರೆ. ಪೃಥ್ವಿ ಶಾ, ಶಿವಂ ದುಬೆ, ಸೂರ್ಯಕುಮಾರ್‌ ಯಾದವ್‌, ಆದಿತ್ಯ ತಾರೆ, ಸಿದ್ಧೇಶ್‌ ಲಾಡ್‌, ಯಶಸ್ವಿ ಜೈಸ್ವಾಲ್‌, ಧವಳ್‌ ಕುಲಕರ್ಣಿ ಮೊದಲಾದ ಆಟಗಾರರೂ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next