ಚೆನ್ನೈ: ರಾಜಕೀಯ ರಂಗದಲ್ಲಿ ಸಂಪೂರ್ಣ ವಾಗಿ ತೊಡಗಿಸಿಕೊಳ್ಳುವ ಸೂಚನೆ ನೀಡಿರುವ ಪ್ರಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್, ಭಾನುವಾರ, (ಅ27) ರಂದು ಬೃಹತ್ ರ್‍ಯಾಲಿ ನಡೆಸಿ ಹವಾ ಎಬ್ಬಿಸಿದ್ದಾರೆ.
ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿ ಬಳಿ ಟಿವಿಕೆ ಮೊದಲ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ವಿಜಯ್ ಅವರು ಸ್ಪಷ್ಟವಾಗಿ ಯಾವುದೇ ಹೆಸರು ಉಲ್ಲೇಖಿಸದೆ “ಪಂಥೀಯ ಮತ್ತು ಭ್ರಷ್ಟ ಶಕ್ತಿಗಳ” ವಿರುದ್ಧ ತಮ್ಮ ಪಕ್ಷವನ್ನು ಸ್ಥಾಪಿಸಿಕೊಂದಿರುವುದಾಗಿ ಹೇಳಿದರು.
ತಮ್ಮ ಪಕ್ಷವು ಸೈದ್ಧಾಂತಿಕವಾಗಿ ದ್ರಾವಿಡ ಮಾದರಿ ಹೆಸರಿನಲ್ಲಿರುವ ಭ್ರಷ್ಟ ಶಕ್ತಿಗಳ ವಿರುದ್ಧ, ರಾಜಕೀಯವಾಗಿ ಪ್ರಚೋದಿಸುವ ಮತೀಯ ಶಕ್ತಿಗಳ ವಿರುದ್ಧ ಹೋರಾಡುತ್ತದೆ ಎಂದು ಘೋಷಿಸಿದ್ದಾರೆ.ತಮಿಳುನಾಡಿನಲ್ಲಿ 2026 ರ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಅಧಿಕಾರಕ್ಕೇರಲು ಸಿದ್ಧವಾಗುತ್ತಿದೆ ಎಂದರು.
‘ಪಿರಪೊಕ್ಕುಂ ಎಲ್ಲ ಉಯಿರುಕ್ಕುಂ’ (ಹುಟ್ಟಿನಿಂದ ಎಲ್ಲಾ ಜೀವಿಗಳು ಸಮಾನರು) ಎಂದು ನಾವು ನಮ್ಮ ಸಿದ್ಧಾಂತದ ಅಡಿಪಾಯವೆಂದು ಘೋಷಿಸಿದ ಕ್ಷಣ, ನಾವು ಪಂಥೀಯ ರಾಜಕೀಯದ ವಿರುದ್ಧ ನಮ್ಮನ್ನು ಸ್ಪಷ್ಟವಾಗಿ ನಿಲ್ಲಿಸಿದ್ದೇವೆ ಮಾತ್ರವಲ್ಲದೆ, ನಮ್ಮ ಸೈದ್ಧಾಂತಿಕ ಶತ್ರುಗಳನ್ನು ಬಹಿರಂಗಪಡಿಸಿದ್ದೇವೆ. ತಮಿಳುನಾಡು ಜಾತ್ಯತೀತ ತತ್ವಗಳ ನಾಡಾಗಿರುವುದರಿಂದ ಇಲ್ಲಿಗೆ ಯಾರು ಬರಬೇಕು ಮತ್ತು ಯಾರು ಬರಬಾರದು ಎಂಬುದು ನಮ್ಮ ಜನರಿಗೆ ಚೆನ್ನಾಗಿ ತಿಳಿದಿದೆ” ಎಂದರು.
ನಮ್ಮ ಪಕ್ಷವು ಪೆರಿಯಾರ್ ಅವರಂತಹ ತಮಿಳು ಐಕಾನ್‌ಗಳ ಸಿದ್ಧಾಂತಗಳನ್ನು ಸ್ವೀಕರಿಸುತ್ತದೆ, ಆದರೆ “ದೇವರ ವಿರೋಧಿ ನಿಲುವು” ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಸೂಪರ್‌ಸ್ಟಾರ್ ನಟನ ಮೊದಲ ರಾಜಕೀಯ ರ್ಯಾಲಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ವಿಜಯ್ ಅವರು ಭರ್ಜರಿ ಭಾಷಣ ಮಾಡಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು. “ನಾನು ರಾಜಕೀಯದಲ್ಲಿ ಶಿಶು ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಈ ಮಗು ತನ್ನ ಕೈಯಲ್ಲಿ ಹಾವು ರಾಜಕೀಯ ಹಿಡಿಯಲು ಸಿದ್ಧವಾಗಿದೆ. ನಮ್ಮ ರಾಜಕೀಯ ಯೋಜನೆ ಪಕ್ಕಾ ಪ್ರಾಯೋಗಿಕವಾಗಿದೆ ಎಂದರು.
”ಅವರು ಜನವಿರೋಧಿ ಸರಕಾರ ನಡೆಸುತ್ತಿದ್ದಾರೆ ಮತ್ತು ದ್ರಾವಿಡ ಮಾದರಿ ಸರಕಾರ ಎಂದು ಹೇಳುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಫ್ಯಾಸಿಸಂ, ಫ್ಯಾಸಿಸಂ, ಫ್ಯಾಸಿಸಂ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ನೀವು ಪಾಯಸ ಆಗಿದ್ದೀರಾ?” ಎಂದು ಪ್ರಶ್ನಿಸಿದರು.
“ನಾವು ಯಾರ ಮೇಲೂ ವೈಯಕ್ತಿಕವಾಗಿ ದಾಳಿ ಮಾಡಲು ಬಂದಿಲ್ಲ. ಯೋಗ್ಯ ರಾಜಕೀಯ ದಾಳಿಗಳು ಮಾತ್ರ ಮಾಡುತ್ತೇವೆ ಎಂದರು.
ವಿಜಯ್ “ಕೂತಾಡಿ” ಎಂಬ ಪದವನ್ನು ಉಲ್ಲೇಖಿಸಿದರು.(ಕೂತಾಡಿ, ಆಡುಮಾತಿನಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಚಲನಚಿತ್ರ ನಟರನ್ನು ಟೀಕಿಸಲು ಬಳಸಲಾಗುತ್ತದೆ) ‘ನೀವು ನನ್ನನ್ನು ದಳಪತಿ ಎಂದು ಕರೆದರೂ ಸಹ ನಾನು ಕೆಲವರಿಗೆ ಕೇವಲ ಕೂತಾಡಿ. ಕೂತಾಡಿಗಳು ಸತ್ಯವನ್ನು ಹೇಳುತ್ತಾರೆ ಎಂದು, ಎಂ.ಜಿ. ರಾಮಚಂದ್ರನ್ ಮತ್ತು ಆಂಧ್ರಪ್ರದೇಶದ ಎನ್.ಟಿ. ರಾಮರಾವ್ ಅವರಂತಹ ನಟ-ರಾಜಕಾರಣಿಗಳ ಬಗ್ಗೆಯೂ ಮಾತನಾಡಿದರು.