Advertisement

ಕೊನೆ 6 ಸೆಕೆಂಡ್ಸ್‌ನಲ್ಲಿ  ಗೆದ್ದ  ತಮಿಳ್‌

11:25 AM Sep 25, 2017 | |

ಹೊಸದಿಲ್ಲಿ: ಕ್ರೀಡೆಯಲ್ಲಿ ಪವಾಡಗಳು ನಡೆಯುವುದು ಮಾಮೂಲು. ಅದಕ್ಕೂಂದು ಸ್ಪಷ್ಟ ಉದಾಹರಣೆ ತಮಿಳ್‌ ತಲೈವಾಸ್‌-ಬೆಂಗಾಲ್‌ ವಾರಿಯರ್ ನಡುವಿನ 5ನೇ ಆವೃತ್ತಿ ಪ್ರೊ ಕಬಡ್ಡಿ ಪಂದ್ಯ. ರವಿವಾರ ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತಂಡಗಳ ಕದನ ರೋಚಕತೆಯ ಪರಾಕಾಷ್ಠೆ ತಲುಪಿತ್ತು. ಕೊನೆಯ 6 ಸೆಕೆಂಡ್ಸ್‌ಗಳಲ್ಲಿ, ಅದೂ ಕೊನೆ ರೈಡಿಂಗ್‌ನಲ್ಲಿ ತಲೈವಾಸ್‌ ತಾರಾ ರೈಡರ್‌ ಅಜಯ್‌ ಠಾಕೂರ್‌ ತಂದ 2 ರೈಡಿಂಗ್‌ ಅಂಕದಿಂದ ತಮಿಳ್‌ ತಲೈವಾಸ್‌ ರೋಚಕ ಗೆಲುವು ಸಾಧಿಸಿತು. ಬೆಂಗಾಲ್‌ 32-33 ಅಂತರದಿಂದ ಆಘಾತಕಾರಿ ಸೋಲು ಅನುಭವಿಸಿತು.

Advertisement

6 ಸೆಕೆಂಡ್‌ಗಳಲ್ಲಿ ಬದಲಾದ ಚಿತ್ರಣ: ಒಂದು ಹಂತದಲ್ಲಿ ಪಂದ್ಯ ಬೆಂಗಾಲ್‌ ಪರ ವಾಲಿತ್ತು. 32-31ರಿಂದ ಬೆಂಗಾಲ್‌ ಮುಂದಿತ್ತು. ವಾರಿಯರ್ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಅಜಯ್‌  ಠಾಕೂರ್‌(8 ಅಂಕ) ಕೊನೆಯ ರೈಡಿಂಗ್‌ಗೆ ಇಳಿದಾಗ ಡ್ರಾ ಸಾಧಿಸಬಹುದು ಎನ್ನುವ ಸಣ್ಣ ಭರವಸೆ ತಲೈವಾಸ್‌ ಅಭಿಮಾನಿಗಳಲ್ಲಿ ಉಳಿದಿತ್ತು. ಆದರೆ ಅಜಯ್‌ ನಿರೀಕ್ಷೆಗೂ ಮೀರಿದ ಆಟ ಪ್ರದರ್ಶಿಸಿದರು. ಎರಡು ಅಂಕ ತಂದರು. ತಂಡ ಗೆಲುವಿನ ಕೇಕೆ ಹಾಕುವಂತೆ ಮಾಡಿದರು. ಸೋನೆಪತ್‌ನಲ್ಲಿ ನಡೆದಿದ್ದ ಯುಪಿ ವಿರುದ್ಧದ ಪಂದ್ಯದಲ್ಲೂ ಅಜಯ್‌ ಇಂತಹುದೇ ಒಂದು ಗೆಲುವನ್ನು ತಂಡಕ್ಕೆ ತಂದುಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿದ್ದ ಬೆಂಗಾಲ್‌: ಇದಕ್ಕೂ ಮೊದಲು ಎರಡನೇ ಅವಧಿಯ ಆರಂಭದಲ್ಲಿ ತಲೈವಾಸ್‌ ಆಟ ಮಂಕಾಗಿತ್ತು. ಆದರೆ ಅರುಣ್‌ 2ನೇ ಅವಧಿಯಲ್ಲಿ ಎರಡು ಸಲ ವಾರಿಯರ್ ಆಟಗಾರರನ್ನು ಸೂಪರ್‌ ಟ್ಯಾಕಲ್‌ ಮಾಡಿ ತಂಡಕ್ಕೆ 23-19 ಅಂತರದಿಂದ ಚೈತನ್ಯ ನೀಡಿದರು. ಬೆಂಗಾಲ್‌ನ ಖ್ಯಾತ ರೈಡರ್‌ ಮಣಿಂದರ್‌ ಅವರನ್ನು ಅರುಣ್‌ ಹಿಡಿದು ಗಮನ ಸೆಳೆದರು. ಆದರೆ 2ನೇ ಅವಧಿಯ ಆಟದಲ್ಲಿ ಪಂದ್ಯ ಮುಗಿಯಲು 7 ನಿಮಿಷ ಇದ್ದಾಗ ತಲೈವಾಸನ್ನು ಬೆಂಗಾಲ್‌ ಮೊದಲ ಸಲ ಆಲೌಟ್‌ ಮಾಡಿತು. ಹೀಗಾಗಿ ಬೆಂಗಾಲ್‌ ಒಂದೇ ಸಲ ಅಂಕಗಳಿಕೆ ಪ್ರಮಾಣವನ್ನು 27-24 ಅಂತರಕ್ಕೆ ಹೆಚ್ಚಿಸಿಕೊಂಡಿತು.

ಮೊದಲ ಅವಧಿಯಲ್ಲಿ ಕನ್ನಡಿಗ ದರ್ಶನ್‌ ಮಿಂಚು: ಇದಕ್ಕೂ ಮೊದಲು ಮೊದಲ ಅವಧಿಯ 10 ನಿಮಿಷದ ಆಟದಲ್ಲಿ ಬೆಂಗಾಲ್‌-ತಮಿಳ್‌ ತಲೈವಾಸ್‌ ಸಮಬಲದ ಹೋರಾಟ ಪ್ರದರ್ಶಿಸಿದವು. ಈ ಅವಧಿಯಲ್ಲಿ ತಮಿಳ್‌ ತಲೈವಾಸ್‌ ಪರ ಕನ್ನಡಿಗ ಡಿಫೆಂಡರ್‌ ದರ್ಶನ್‌ ಜೆ.ದೇವಾಂಗ ಮಿಂಚಿದರು.

ಡೆಲ್ಲಿಗೆ ಮತ್ತೆ ಸೋಲು (24-42) 
ಹೊಸದಿಲ್ಲಿ: ಪ್ರೊ ಕಬಡ್ಡಿ ಲೀಗ್‌ನ ದಿಲ್ಲಿ ಚರಣದ ರವಿವಾರದ ಪಂದ್ಯದಲ್ಲೂ ಆತಿಥೇಯ ದಬಾಂಗ್‌ ಡೆಲ್ಲಿ ಸೋಲು ಕಂಡು ನಿರಾಸೆಗೊಳಗಾಗಿದೆ. ತವರಿನಲ್ಲಿ ಇದು ಡೆಲ್ಲಿಗೆ ಒದಗಿದ ಸತತ ಮೂರನೇ ಸೋಲು ಆಗಿದೆ. ಈ ಹಿಂದಿನ ಪಂದ್ಯಗಳಲ್ಲಿ ಮುಂಬಾ ಮತ್ತು ಪುನೇರಿಗೆ ಶರಣಾಗಿದ್ದ  ಡೆಲ್ಲಿ ತಂಡವು ರವಿವಾರದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡಕ್ಕೆ 24-42 ಅಂಕಗಳ ಭಾರೀ ಅಂತರದಲ್ಲಿ ಸೋತಿದೆ. 

Advertisement

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next