ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿರುವ ಸರಕಾರಿ ಸ್ವಾಮ್ಯದ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್‌ನ ವಿದ್ಯುತ್ ಘಟಕದ ಬಾಯ್ಲರ್ ಸ್ಫೋಟಗೊಂಡು ಆರು ಮಂದಿ ಅಸುನೀಗಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 17 ಮಂದಿ ಗಾಯಗೊಂಡಿದ್ದು, ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಘಟಕದ ಸ್ಟೇಜ್ 2ರ ಐದನೇ ಘಟಕದಲ್ಲಿ ಬುಧವಾರ ಬೆಳಗ್ಗೆ ನೌಕರರು ಕೆಲಸ ಪುನರಾರಂಭಿಸಿದಾಗ ದಿಢೀರ್‌ನೇ ಬಾಯ್ಲರ್ ಸ್ಫೋಟಗೊಂಡಿದೆ.
ಘಟನಾ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಪರಿಸ್ಥಿತಿ ಚಿಂತಾಜನಕವಾಗಿದೆ.
ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಅಸು ನೀಗಿದವರೆಲ್ಲ 25-45 ವರ್ಷ ವಯೋಮಿತಿಯವರಾಗಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡು ಸಿಎಂ ಪಳನಿ ಸ್ವಾಮಿ ಜತೆಗೆ ಮಾತನಾಡಿ ಅಗತ್ಯ ಬಿದ್ದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.