ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಮುಂದೆ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿಯ (GST) ಸಂಕೀರ್ಣತೆಯ ಬಗ್ಗೆ ತಮಿಳುನಾಡಿನ ಪ್ರಸಿದ್ಧ ರೆಸ್ಟೋರೆಂಟ್ ಚೈನ್ ನ ಮಾಲೀಕರು ಕಳವಳ ವ್ಯಕ್ತಪಡಿಸಿದ ವೀಡಿಯೊ ಇದೀಗ ವೈರಲ್ ಆಗಿದೆ. ಆದರೆ, ಕಾರ್ಯಕ್ರಮದ ನಂತರ ನಡೆದ ಖಾಸಗಿ ಮಾತುಕತೆಯಲ್ಲಿ ಶ್ರೀ ಅನ್ನಪೂರ್ಣ ಹೋಟೆಲ್ (Sri Annapoorna restaurant) ಮಾಲೀಕ ಶ್ರೀನಿವಾಸನ್ ಅವರು ಕೇಂದ್ರ ಸಚಿವೆ ಸೀತಾರಾಮನ್ ಬಳಿ ಕ್ಷಮೆಯಾಚಿಸುವ ವಿಡಿಯೋವನ್ನು ಬಿಜೆಪಿಯ ತಮಿಳುನಾಡು ಘಟಕ ಪೋಸ್ಟ್ ಮಾಡಿದ ನಂತರ ವಿವಾದ ಆರಂಭವಾಗಿದೆ.
ಕೊಯಮತ್ತೂರು ಜಿಲ್ಲೆಯಲ್ಲಿ ಹಣಕಾಸು ಸಚಿವರೊಂದಿಗೆ ವ್ಯಾಪಾರ ಮಾಲೀಕರ ಸಭೆಯ ವೇಳೆ ಈ ಘಟನೆ ನಡೆದಿದೆ.
ಸಭೆಯಲ್ಲಿ, ತಮಿಳುನಾಡಿನ ಜನಪ್ರಿಯ ಹೋಟೆಲ್ ಚೈನ್ ಆದ ಶ್ರೀ ಅನ್ನಪೂರ್ಣ ರೆಸ್ಟೊರೆಂಟ್‌ನ ಅಧ್ಯಕ್ಷ ಶ್ರೀನಿವಾಸನ್, ಆಹಾರ ಪದಾರ್ಥಗಳ ಮೇಲಿನ ವಿಭಿನ್ನ ಜಿಎಸ್‌ಟಿ ದರಗಳಿಂದ ರೆಸ್ಟೋರೆಂಟ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಹೇಳಿದ್ದರು.
ಕ್ರೀಮ್ ತುಂಬಿದ ಬನ್‌ಗಳಿಗೆ 18% ತೆರಿಗೆ ವಿಧಿಸಲಾಗುತ್ತದೆ. ಆದರೆ ಬನ್ ಗಳ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ ಎಂದು ಅವರು ಹೈಲೈಟ್ ಮಾಡಿದರು.
“ಸ್ವೀಟ್ಸ್ ಗಳ ಮೇಲೆ 5% ಆದರೆ ಖಾರದ ಮೇಲೆ 12% ಜಿಎಸ್‌ಟಿ ಇದೆ. ಕ್ರೀಮ್ ತುಂಬಿದ ಬನ್‌ಗಳ ಮೇಲೆ 18% ಜಿಎಸ್‌ಟಿ ಇದೆ, ಆದರೆ ಬನ್‌ಗಳ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ. ಗ್ರಾಹಕರು ಆಗಾಗ್ಗೆ ದೂರು ನೀಡುತ್ತಾರೆ, ‘ನನಗೆ ಬನ್ ನೀಡಿ, ನಾನೇ ಕ್ರೀಮ್ – ಜಾಮ್ ಸೇರಿಸುತ್ತೇನೆ ಎನ್ನುತ್ತಾರೆ” ಎಂದು ಶ್ರೀನಿವಾಸನ್ ಸಭೆಯಲ್ಲಿ ಹೇಳಿದ್ದರು.
ನಂತ ನಡೆದ ಖಾಸಗಿ ಮಾತುಕತೆಯ ಸಂದರ್ಭದಲ್ಲಿ, ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್ ಅವರ ಸಮ್ಮುಖದಲ್ಲಿ ಶ್ರೀನಿವಾಸನ್ ತಮ್ಮ ಹೇಳಿಕೆಗಾಗಿ ಸೀತಾರಾಮನ್ ಅವರಲ್ಲಿ ಕ್ಷಮೆಯಾಚಿಸಿದರು. “ನನ್ನ ಹೇಳಿಕೆಗಳಿಗಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ” ಎಂದು ಅವರು ಹೇಳಿದ್ದಾರೆ.
ಕ್ಷಮೆಯಾಚಿಸುವ ವಿಡಿಯೋವನ್ನು ಬಿಜೆಪಿಯ ತಮಿಳುನಾಡು ಘಟಕ ಪೋಸ್ಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಹೋಟೆಲ್ ಮಾಲೀಕ ಶ್ರೀನಿವಾಸನ್ ವಿರುದ್ದ ದರ್ಪ ತೋರಿದ್ದೀರೆಂದು ಡಿಎಂಕೆ ಮತ್ತು ಕಾಂಗ್ರೆಸ್ ಬಿಜೆಪಿ ವಿರುದ್ದ ಕಿಡಿಕಾರಿದೆ. ವ್ಯಾಪಕ ಟೀಕೆಗಳ ನಡುವೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಖಾಸಗಿ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.