ಚೆನ್ನೈ: ನಗರದ ಹೊರವಲಯದಲ್ಲಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಖ್ಯಾತ ನಟಿ ಹಾಗೂ ಆತನ ಪತಿಯನ್ನು ಬಂಧಿಸಿರುವುದಾಗಿ ತಮಿಳುನಾಡು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಚೆನ್ನೈನ ಹೊರವಲಯವಾದ ಪಣೈಯೂರ್ ಎಂಬಲ್ಲಿ ತಮಿಳು ನಟಿ ಸಂಗೀತಾ ಬಾಲನ್ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ರೆಸಾರ್ಟ್ ನಲ್ಲಿದ್ದ ವಿವಿಧ ರಾಜ್ಯಗಳ ಹಲವಾರು ಮಹಿಳೆಯರನ್ನು ರಕ್ಷಿಸಿದ್ದು, ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಟಿ ಸಂಗೀತಾ ಪತಿ ಸತೀಶ್ ಯುವತಿಯರಿಗೆ ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ಅವಕಾಶ ಕೊಡುವುದಾಗಿ ಭರವಸೆ ನೀಡುವ ಮೂಲಕ ಈ ದಂಧೆಗೆ ದೂಡಲು ನೆರವು ನೀಡುತ್ತಿದ್ದು ಆತನನ್ನೂ ಬಂಧಿಸಲಾಗಿದೆ.
ಬಾಲನ್ ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿಯನ್ನು ಪಡೆದಿದ್ದ ಪೊಲೀಸ್ ಅಧಿಕಾರಿಗಳು ಖಾಸಗಿ ರೆಸಾರ್ಟ್ ವೊಂದರ ಮೇಲೆ ದಾಳಿ ನಡೆಸಿದ ವೇಳೆ ಪ್ರಕರಣ ಪತ್ತೆಯಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಈ ಸೆಕ್ಸ್ ರಾಕೆಟ್ ನ ಮಾಸ್ಟರ್ ಮೈಂಡ್ ಸಂಗೀತಾ ಎಂಬುದಾಗಿ ಬಂಧಿತರು ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
1996ರಲ್ಲಿ ಸಿನಿಮಾ ರಂಗದಲ್ಲಿ ನಟನೆ ಆರಂಭಿಸಿದ್ದ ಸಂಗೀತಾ ಬಾಲನ್ ಕರುಪ್ಪು ರೋಜಾ ಸಿನಿಮಾ ಭರ್ಜರಿ ಹೆಸರು ತಂದುಕೊಟ್ಟಿತ್ತು. ಅಷ್ಟೇ ಅಲ್ಲ ತಮಿಳು ಟೆಲಿವಿಷನ್ ರಂಗದಲ್ಲೂ ಬಾಲನ್ ಹೆಸರು ಮಾಡಿದ್ದಳು. ತಮಿಳಿನ ವಾಣಿ ರಾಣಿ, ಚೆಲ್ಲಮೆ ಅವಳ್, ಸಬಿತಾ ಅಲಿಯಾಸ್ ಸಭಾಪತಿ ಮತ್ತು ವಾಲ್ಲಿ ಹೀಗೆ ಹಲವು ಸಿರೀಯಲ್ ಗಳ ಮೂಲಕ ಸಂಗೀತ ಚಿರಪರಿಚಿತಳಾಗಿದ್ದಳು.