Advertisement
ಅಕ್ಕ, ತಂಗಿ ಮನೆಗೆ ಹೊರಟರು. ದಾರಿಯಲ್ಲಿ ಕಾಮ್, “ಅಕ್ಕ, ನಿನ್ನ ತಲೆಗೂದಲು ತುಂಬ ಮಣ್ಣಾಗಿದೆ. ತೊಳೆದುಕೊಳ್ಳೇ’ ಎಂದಳು. ಅವಳು ತಲೆಗೆ ಸ್ನಾನ ಮಾಡುವಾಗ ಅವಳ ಬುಟ್ಟಿಯಲ್ಲಿರುವ ಮೀನುಗಳನ್ನು ತನ್ನ ಬುಟ್ಟಿಗೆ ತುಂಬಿಕೊಂಡು ಅವಸರವಸರವಾಗಿ ಮನೆಗೆ ಬಂದುಬಿಟ್ಟಳು. ಖಾಲಿ ಬುಟ್ಟಿಯೊಂದಿಗೆ ಟಮ್ ಬಂದಾಗ ಅವಳ ಚಿಕ್ಕಮ್ಮ ಚೆನ್ನಾಗಿ ಶಿಕ್ಷಿಸಿಬಿಟ್ಟಳು.
Related Articles
Advertisement
ಮಲತಾಯಿ ಸುಮ್ಮನಿರಲಿಲ್ಲ. ಟಮ್‌ಳನ್ನು ಬಳಿಗೆ ಕರೆದು, “ಮದುಮಗಳು ಕೆರೆಸ್ನಾನ ಮಾಡುವ ಸಂಪ್ರದಾಯವಿದೆ. ಉಡುಗೆಗಳನ್ನು, ಒಡವೆಗಳನ್ನು ಕಳಚಿಟ್ಟು ಬಾ ನನ್ನೊಂದಿಗೆ’ ಎಂದು ಕರೆದಳು. ಕೆರೆಯಲ್ಲಿ ಅವಳನ್ನು ಮುಳುಗಿಸಿ ಕೊಂದುಬಿಟ್ಟಳು. ಅವಳ ಒಡವೆಗಳನ್ನು ತನ್ನ ಮಗಳಿಗೆ ತೊಡಿಸಿ ರಾಜಕುಮಾರನ ಬಳಿಗೆ ಕಳುಹಿಸಿದಳು. ಆದರೆ ದೇವತೆಗಳು ಟಮ್ ಒಂದು ನೈಟಿಂಗೇಲ್ ಹಕ್ಕಿಯಾಗುವಂತೆ ಮಾಡಿ ರಾಜಕುಮಾರನ ಬಳಿಗೆ ತಂದುಬಿಟ್ಟರು. ಹಕ್ಕಿಯು ಸುಶ್ರಾವ್ಯವಾಗಿ, “ಸುಂದರವಾದ ಹುಡುಗಿ ನೀರಿನಲ್ಲಿ ಮುಳುಗಿ ಸತ್ತಳು. ಕಾಗೆ ಬಂಗಾರ ಚಿನ್ನವಲ್ಲ’ ಎಂದು ಹಾಡಿತು. ರಾಜಕುಮಾರನಿಗೆ ಮೋಸವಾಗಿರುವುದು ತಿಳಿಯಿತು. ಟಮ್ ಇಲ್ಲದ ಮೇಲೆ ಅವನಿಗೆ ರಾಜ್ಯ, ಅಧಿಕಾರ ಯಾವುದೂ ಬೇಡವಾಯಿತು. ಅವಳಿಗಾಗಿ ಪರಿತಪಿಸುತ್ತ ಮನೆಯಿಂದ ಹೊರಟ. ಕಾಡುಮೇಡುಗಳಲ್ಲಿ ಅವಳನ್ನೇ ಕರೆಯುತ್ತ ಅಲೆಯತೊಡಗಿದ.
ರಾಜಕುಮಾರನ ವಿರಹವನ್ನು ಕಂಡು ದೇವತೆಗಳಿಗೆ ಕನಿಕರವುಂಟಾಯಿತು. ಅವರು ಅವನ ಮುಂದೆ ಕಾಣಿಸಿಕೊಂಡು ಎತ್ತರವಾದ ಒಂದು ಮರವನ್ನು ತೋರಿಸಿದರು. “ಯಾರಿಗೆ ಹೆಂಡತಿಯ ಮೇಲೆ ನಿಜವಾದ ಪ್ರೇಮವಿದೆಯೋ ಅವರಿಂದ ಮಾತ್ರ ಈ ಮರದ ತುದಿಗೇರಲು ಸಾಧ್ಯ. ಅಲ್ಲಿರುವ ಕುಂಬಳಕಾಯಿಗಿಂತ ದೊಡ್ಡ ಗಾತ್ರದ ಒಂದೇ ಒಂದು ಹಣ್ಣನ್ನು ಜೋಪಾನವಾಗಿ ಕೆಳಗೆ ತರಬೇಕು. ಕೆಳಗೆ ಬಿದ್ದು ಒಡೆಯಬಾರದು. ಈ ಹಣ್ಣನ್ನು ಕುದಿಯುವ ನೀರಿಗೆ ಹಾಕಬೇಕು. ಪ್ರೀತಿ ಸತ್ಯವಾಗಿದ್ದರೆ ಪ್ರಿಯತಮೆ ದೊರೆಯುತ್ತಾಳೆ. ಪ್ರೀತಿಯಲ್ಲಿ ಕಪಟವಿದ್ದರೆ ಅಲ್ಲಿ ಕರಗಿಹೋಗುತ್ತಾಳೆ’ ಎಂದು ಹೇಳಿದರು.
ರಾಜಕುಮಾರ ಲೀಲಾಜಾಲವಾಗಿ ದೊಡ್ಡ ಮರವನ್ನು ಏರಿದ. ಭಾರವಿರುವ ಹಣ್ಣನ್ನು ಕೊಯಿದ. ಸಲೀಸಾಗಿ ತೆಗೆದುಕೊಂಡು ಕೆಳಗಿಳಿದ. ಅದನ್ನು ಅರಮನೆಗೆ ತಂದ. ದೊಡ್ಡ ಕಡಾಯಿಯಲ್ಲಿ ನೀರನ್ನು ಕುದಿಸಲು ಹೇಳಿ ಹಣ್ಣನ್ನು ಅದಕ್ಕೆ ಹಾಕಿದ. ಮಲತಾಯಿ ಕುತೂಹಲದಿಂದ, “ಅಳಿಯಂದಿರೇ, ಈ ಹಣ್ಣನ್ನು ಯಾಕೆ ಕುದಿಸುತ್ತಿದ್ದೀರಿ?’ ಎಂದು ಕೇಳಿದಳು. ರಾಜಕುಮಾರ ದೇವತೆಗಳು ಹೇಳಿದ ವಿಷಯವನ್ನು ಅವಳಿಗೆ ತಿಳಿಸಿದ. “ನನ್ನ ಪ್ರಿಯತಮೆಗೆ ನನ್ನ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ ಅವಳು ಮರಳಿ ನನ್ನ ಬಳಿಗೆ ಬರುತ್ತಾಳೆ’ ಎಂದು ಹೇಳಿದ.
ಮಲತಾಯಿಗೆ ಹೊಟ್ಟೆಯುರಿ ತಾಳಲಾಗಲಿಲ್ಲ. “ನಿಜವಾದ ಪ್ರೀತಿ ಇರುವುದು ನನ್ನ ಮಗಳಿಗೆ. ಬೇಕಿದ್ದರೆ ಈ ಪರೀಕ್ಷೆಯನ್ನು ನನ್ನ ಮಗಳಿಗೂ ವಿಧಿಸಿ ನೋಡಿ’ ಎಂದು ಹೇಳಿ ಕುದಿಯುವ ನೀರಿನ ಕಡಾಯಿಗೆ ಬಲವಂತವಾಗಿ ಕಾಮ್‌ಳನ್ನು ಇಳಿಸಿದಳು. ಬೆಂಕಿಯ ಕಾವಿನಿಂದ ಕಾಮ್ ಅಲ್ಲಿಯೇ ಕರಗಿಹೋದಳು ಆದರೆ ಕುದಿಯುವ ನೀರಿನಲ್ಲಿದ್ದ ಹಣ್ಣು ನಿಧಾನವಾಗಿ ಕರಗಿತು. ಒಳಗಿದ್ದ ನೀರು ಮಂಜಿನಂತೆ ತಣ್ಣಗಾಯಿತು. ಅದರಿಂದ ಸುಂದರಿಯಾದ ಟಮ್ ಕೆಳಗಿಳಿದು ಬಂದಳು. ರಾಜಕುಮಾರ ಅವಳೊಂದಿಗೆ ಸುಖವಾಗಿದ್ದ.
– ಪರಾಶರ