Advertisement

ಸರಕಾರಿ ಶಾಲೆ ಉಳಿಸಲು ತಾ.ಪಂ. ಸದಸ್ಯರ ಪ್ರಯತ್ನ!

10:30 AM Jul 22, 2018 | Team Udayavani |

ಸುಬ್ರಹ್ಮಣ್ಯ : ಎಲ್ಲರೂ ಸರಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವ ತಾಳಿ, ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿರುವಾಗ, ಇಲ್ಲೊಬ್ಬರು ಜನಪ್ರತಿನಿಧಿ ತಮ್ಮಿಬ್ಬರೂ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ, ಕನ್ನಡ ಪ್ರೇಮ ಮೆರೆಯುತ್ತಿದ್ದಾರೆ.

Advertisement

ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ. ಸದಸ್ಯ, ಯೇನೆಕಲ್ಲು ಗ್ರಾಮದ ಅಶೋಕ ನೆಕ್ರಾಜೆ ಸುಳ್ಯ ತಾ.ಪಂ. ವಿಪಕ್ಷ ನಾಯಕರೂ ಆಗಿದ್ದಾರೆ. ಅವರ ಪತ್ನಿ ಸುಳ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೌನ್ಸೆಲರ್‌ ಆಗಿದ್ದಾರೆ. ಆದರೂ ಈ ದಂಪತಿ ತಮ್ಮಿಬ್ಬರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ನುಡಿದಂತೆ ನಡೆದು, ಮಾದರಿಯಾಗಿದ್ದಾರೆ. ಈ ಮೂಲಕ ಸರಕಾರಿ ಶಾಲೆ ಉಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಕೃಷಿ ಕುಟುಂಬದವರಾದ ಅಶೋಕ ನೆಕ್ರಾಜೆ ಸರಕಾರಿ ಶಾಲೆಯಲ್ಲೇ ಓದಿದವರು. ಕೃಷಿ ಮಾಡುತ್ತಲೇ ಕಲಿತವರು. ಈಗ ರಾಜಕೀಯದಲ್ಲಿದ್ದರೂ ತಮ್ಮ ತೋಟದ ಕೆಲಸಗಳನ್ನು ತಾವೇ ನಿರ್ವಹಿಸುತ್ತಾರೆ. ಕಳೆದ ವರ್ಷದವರೆಗೂ ತಮ್ಮ ತೋಟಕ್ಕೆ ಮಳೆಗಾಲದಲ್ಲಿ ತಾವೇ ಔಷಧ ಸಿಂಪಡಿಸುತ್ತಿದ್ದರು. ಯುವಕ ಮಂಡಲದ ಅಧ್ಯಕ್ಷರಾಗಿ, ಯೇನೆಕಲ್ಲು ಸಹಕಾರಿ ಸಂಘದಲ್ಲಿ 10 ವರ್ಷ ನಿರ್ದೇಶಕರಾಗಿ, ಸುಬ್ರಹ್ಮಣ್ಯ ಪಶುಸಂಗೋಪನ ಸಂಘದ ನಿರ್ದೇಶಕರಾಗಿ, ಸುಬ್ರಹ್ಮಣ್ಯ ಬಳಕೆದಾರರ ಸಂಘದ ಅಧ್ಯಕ್ಷರಾಗಿದ್ದವರು. ಸುಳ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ತಾ.ಪಂ. ವಿಪಕ್ಷ ನಾಯಕರಾಗಿದ್ದಾರೆ. ಸರಕಾರಿ ಶಾಲೆ ಮೇಲೆ ಪ್ರೀತಿ ಇರುವ ಕಾರಣಕ್ಕೆ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವಳಾದ ಸೃಷ್ಟಿ ಎನ್‌.ಎ. ಕಮಿಲ ಸಮೀಪದ ಮೊಗ್ರ ಸ.ಹಿ.ಪ್ರಾ. ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಳೆ. ಈಕೆಯ ತಮ್ಮ ಸೃಜನ್‌ ಅದೇ ಶಾಲೆಯ ಅಂಗನವಾಡಿಗೆ ಹೋಗುತ್ತಿದ್ದಾನೆ.

ಐವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿ
ಸಮಾಜ ಸೇವೆಯಲ್ಲೂ ಸಕ್ರಿಯರಾಗಿರುವ ಅಶೋಕ್‌, ಅಭಯ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ಸ್ಥಳೀಯ ಐದು ಬಡ ಮಕ್ಕಳ ಶಿಕ್ಷಣದ ಪೂರ್ಣ ವೆಚ್ಚ ಭರಿಸುತ್ತಿದ್ದಾರೆ. ಈ ಪೈಕಿ ಇಬ್ಬರು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲದೆ, ಸರಕಾರಿ ಶಾಲೆಯಲ್ಲಿ ಕಲಿಯುವ ಹಲವು ಮಕ್ಕಳಿಗೆ ಪುಸ್ತಕ, ಬ್ಯಾಗ್‌, ಕೊಡೆ ಇತ್ಯಾದಿಗಳನ್ನು ನೀಡುತ್ತ ಬಂದಿದ್ದಾರೆ. ತಾ.ಪಂ. ಸಭೆಗಳಲ್ಲೂ ಶಿಕ್ಷಣದ ಕುರಿತಾಗಿ ಧ್ವನಿ ಎತ್ತುತ್ತಾರೆ.

ಮಕ್ಕಳನ್ನು ಕಳುಹಿಸಲು ಪಟ್ಟು
ಸುಬ್ರಹ್ಮಣ್ಯದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿತ್ತು. ಈ ವೇಳೆ ಸಮ್ಮೇಳನ ಮೆರವಣಿಗೆಗೆ ಹಾಗೂ ಸಮ್ಮೇಳನ ನಡೆಯುವಲ್ಲಿಗೆ ಕೂಗಳತೆ ದೂರದಲ್ಲಿದ್ದ ಸರಕಾರಿ ಶಾಲೆಯ ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಕಳುಹಿಸಿಕೊಟ್ಟಿರಲಿಲ್ಲ. ಇದಕ್ಕೆ ಬೇಸರಗೊಂಡ ಅಶೋಕ್‌ ಅವರು ಮಕ್ಕಳನ್ನು ಕಳುಹಿಕೊಡದಿದ್ದಲ್ಲಿ ಸಭಾ ವೇದಿಕೆಯಲ್ಲೆ ಕುಳಿತು ಪ್ರತಿಭಟಿಸುವ ಬೆದರಿಕೆ ಒಡ್ಡಿದ್ದರು. ಬಳಿಕ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. 

Advertisement

 ಹಿಂಜರಿಕೆ ಇಲ್ಲ
ಹೆಚ್ಚು ಹಣ ಭರಿಸಿ ಶಿಕ್ಷಣ ನೀಡುವುದು ದೊಡ್ಡ ವಿಚಾರವಲ್ಲ. ಕನ್ನಡ ಶಾಲೆ ಉಳಿಯಬೇಕು. ಅದಕ್ಕೆ ಬೇಕಿರುವುದು ತ್ಯಾಗ. ಮನಸ್ಸು. ಕನ್ನಡ ಶಾಲೆ ಮೇಲೆ ಅಭಿಮಾನ ಬೆಳೆಸಿಕೊಳ್ಳದಿದ್ದರೆ ಸರಕಾರಿ ಶಾಲೆ ಉಳಿಯುವುದು ಹೇಗೆ? ಕನ್ನಡ ಶಾಲೆ ಉಳಿಯುತ್ತದೆ ಎಂದಾದರೆ ಏನೆ ತೊಂದರೆ, ಅವಮಾನ ಬಂದರೂ ಅದನ್ನು ಸಹಿಸಿಕೊಳ್ಳುತ್ತೇವೆ. ಅದಕ್ಕಾಗಿ ತನ್ನ ಮಕ್ಕಳಿಬ್ಬರನ್ನು ಕನ್ನಡ ಶಾಲೆಯಲ್ಲಿ ಓದಿಸಲು ನಿರ್ಧರಿಸಿದ್ದೇವೆ.
 - ಅಶೋಕ ನೆಕ್ರಾಜೆ,
    ತಾ.ಪಂ. ಸದಸ್ಯ 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next