Advertisement

ಬಂಟ್ವಾಳ: ತಾ.ಪಂ.ನಲ್ಲಿ 6 ಸ್ಥಾನ ಇಳಿಕೆ; ಜಿಲ್ಲಾ ಪಂಚಾಯತ್‌ 1 ಸ್ಥಾನ ಏರಿಕೆ

12:28 AM Feb 12, 2021 | Team Udayavani |

ಬಂಟ್ವಾಳ: ಈ ಬಾರಿಯ ಜಿ.ಪಂ.ಹಾಗೂ ತಾ.ಪಂ.ಚುನಾವಣೆಗೆ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಚುನಾವಣ ಆಯೋಗವು ಆದೇಶ ಹೊರಡಿಸಿದ್ದು, ಅದರ ಪ್ರಕಾರ ಈ ಬಾರಿ ಬಂಟ್ವಾಳ ತಾ.ಪಂ.ನಲ್ಲಿ 28 ಹಾಗೂ ತಾಲೂಕು ವ್ಯಾಪ್ತಿಯಲ್ಲಿ 10 ಜಿ.ಪಂ.ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Advertisement

ಇಡೀ ಜಿಲ್ಲೆಯಲ್ಲೇ ಹೆಚ್ಚಿನ ತಾ.ಪಂ.ಕ್ಷೇತ್ರಗಳನ್ನು ಹೊಂದಿರುವ ಬಂಟ್ವಾಳ ತಾಲೂಕಿನಲ್ಲಿ ಈ ಹಿಂದೆ 34 ಕ್ಷೇತ್ರಗಳಿದ್ದು, ಪ್ರಸ್ತುತ ಅದು 28ಕ್ಕೆ ಇಳಿದಿದೆ. ಜತೆಗೆ ಈ ಹಿಂದೆ 9 ಜಿ.ಪಂ.ಕ್ಷೇತ್ರಗಳಿದ್ದದ್ದು 10ಕ್ಕೆ ಏರಿಕೆಯಾಗಿದೆ. ಪ್ರಸ್ತುತ ತಾ.ಪಂ.ಹಾಗೂ ಜಿ.ಪಂ.ಸ್ಥಾನಗಳನ್ನು ಆಯೋಗ ನೀಡಿದ್ದು, ಪುನರ್‌ ವಿಂಗಡನೆಯ ಕಾರ್ಯ ಇನ್ನಷ್ಟೇ ಆಗಬೇಕಿದೆ.

ಸದ್ಯಕ್ಕೆ ಬಂಟ್ವಾಳ ತಾಲೂಕಿನ ಯಾವುದೇ ಭಾಗವು ಇತರ ತಾಲೂಕಿಗೆ ಇಬ್ಭಾಗವಾಗದೇ ಇದ್ದರೂ, ತಾ.ಪಂ.ಕ್ಷೇತ್ರದಲ್ಲಿ 6 ಸ್ಥಾನಗಳು ಕಡಿಮೆಯಾಗಿದೆ. ಈಗಾಗಲೇ ಉಳ್ಳಾಲ ತಾಲೂಕು ಘೋಷಣೆಯಾಗಿ ಬಂಟ್ವಾಳದ ಬಾಳೆಪುಣಿ, ಕುರ್ನಾಡು, ನರಿಂಗಾನ, ಫಜೀರು, ಸಜೀಪನಡು ಹಾಗೂ ಸಜೀಪಪಡು ಗ್ರಾ.ಪಂ.ಗಳು ಸೇರ್ಪಡೆಯಾಗಲಿವೆ. ಆದರೆ ಅದರ ಅನುಷ್ಠಾನ ಕಾರ್ಯ ಇನ್ನೂ ಆಗದೇ ಇರುವುದರಿಂದ ಈ ಬಾರಿ ಎಲ್ಲ ಪ್ರದೇಶಗಳು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲೇ ಇರಲಿವೆ.

ಕ್ಷೇತ್ರಗಳ ಸಂಖ್ಯೆ ವ್ಯತ್ಯಾಸ
ತಾ.ಪಂ.ಹಾಗೂ ಜಿ.ಪಂ.ಸ್ಥಾನಗಳಲ್ಲಿ ವ್ಯತ್ಯಾಸವಾಗಿರುವುದು ನಮ್ಮ ಗಮನಕ್ಕೆ ಬಂದಿದ್ದು, ಕ್ಷೇತ್ರ ಪುನರ್‌ ವಿಂಗಡನೆಯ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಮುಂದೆ ಯಾವ ರೀತಿಯಲ್ಲಿ ಪುನರ್‌ ವಿಂಗಡಣೆ ಕಾರ್ಯ ನಡೆಯುತ್ತದೆ ಎಂಬುದರ ಕುರಿತು ಇನ್ನೂ ಕೂಡ ಮಾಹಿತಿ ಬಂದಿಲ್ಲ.
-ರಶ್ಮಿ ಎಸ್‌.ಆರ್‌., ತಹಶೀಲ್ದಾರ್‌, ಬಂಟ್ವಾಳ

ರಾಜಕೀಯ ಲೆಕ್ಕಾಚಾರ
ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಗ್ರಾ.ಪಂ.ಗಳು ನಗರ ಸ್ಥಳೀಯ ಸಂಸ್ಥೆಯಾಗಿ ಮೇಲ್ದರ್ಜೆಗೇರಿಲ್ಲ. ಪುದು ಮೇಲ್ದರ್ಜೆಗೇರುತ್ತದೆ ಎಂಬ ಪ್ರಸ್ತಾವವಿದ್ದರೂ, ಅದು ಇನ್ನೂ ಕೂಡ ಗ್ರಾ.ಪಂ.ಆಗಿಯೇ ಇದೆ. ಹೀಗಿದ್ದರೂ, 6 ಸ್ಥಾನಗಳು ಕಡಿಮೆಯಾಗಿವೆ. ಜತೆಗೆ ಒಂದು ಜಿ.ಪಂ.ಕ್ಷೇತ್ರ ಹೆಚ್ಚಾಗಿರುವುದು ವಿಶೇಷವಾಗಿದೆ.

Advertisement

ಈ ರೀತಿಯ ಪುನರ್‌ ವಿಂಗಡನೆ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆ ನೀಡದಿದ್ದರೂ, ರಾಜಕೀಯ ಪಕ್ಷಗಳಿಗೆ ಬಹಳ ಮಹತ್ವ ಎನಿಸಿಕೊಳ್ಳಲಿದೆ. ತಾ.ಪಂ., ಜಿ.ಪಂ.ಸ್ಥಾನಗಳಿಗೆ ಕಣ್ಣಿಟ್ಟಿರುವ ಅಭ್ಯರ್ಥಿಗಳಿಗೆ ಲಾಭ-ನಷ್ಟದ ವಿಚಾರವಾಗಿದೆ. ಅಂದರೆ ಪುನರ್‌ ವಿಂಗಡನೆಯ ಮೇಲೆ ನಮ್ಮ ಪ್ರಾಬಲ್ಯವಿರುವ ಗ್ರಾಮದ ಭಾಗಗಳು ಸೇರ್ಪಡೆ ಅಥವಾ ತಪ್ಪಿ ಹೋಗಲಿವೆಯೇ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next