Advertisement

ಕೊಳೆ ರೋಗಕ್ಕೆ ಪರಿಹಾರವೇ ಬಂದಿಲ್ಲ

01:52 PM Jun 24, 2020 | Suhan S |

ಭಟ್ಕಳ: ತಾಲೂಕು ಪಂಚಾಯತ್‌ ಸಭಾಭವನದಲ್ಲಿ ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಾಲೂಕಿನ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

Advertisement

ತೋಟಗಾರಿಕಾ ಇಲಾಖೆಯಿಂದ ಅಡಿಕೆ ಕೊಳೆ ರೋಗಕ್ಕೆ ಪರಿಹಾರ ದೊರೆತಿಲ್ಲ ಎನ್ನುವ ಸದಸ್ಯರ ಆರೋಪಕ್ಕೆ ಉತ್ತರಿಸಿದ ತಾಲೂಕು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸಂಧ್ಯಾ ಭಟ್ಟ, ಕಳೆದ ವರ್ಷ ಒಟ್ಟೂ 966 ರೈತರು ಅಡಿಕೆ ಕೊಳೆರೋಗದ ಕುರಿತು ದೂರು ನೀಡಿದ್ದು, ಸಮೀಕ್ಷೆ ನಡೆಸಿ ಪರಿಹಾರ ನೀಡಲು ಶಿಫಾರಸು ಮಾಡಿಲಾಗಿತ್ತು. ಆದರೆ ಪರಿಹಾರ ನೀಡುವುದು ಕಂದಾಯ ಇಲಾಖೆಯಾದ್ದರಿಂದ ನಾವು ಆ ಕುರಿತು ಹೇಳಲು ಆಗುವುದಿಲ್ಲ ಎಂದರು.

ಕಂದಾಯ ಇಲಾಖೆಯ ಶಿರಸ್ತೇದಾರ ಭಾಸ್ಕರ ಭಟ್ಟ, ಸರಕಾರಕ್ಕೆ ಈಗಾಗಲೇ ವರದಿಯನ್ನು ನಿಡಲಾಗಿದ್ದು ಪರಿಹಾರ ಇನ್ನಷ್ಟೇ ಬರಬೇಕಾಗಿದೆ. ಪರಿಹಾರ ಮಂಜೂರಿಯಾಗಿ ಬಂದ ತಕ್ಷಣ ಅವರವರ ಖಾತೆಗೆ ಜಮಾ ಮಾಡಲಾಗುವುದು ಎಂದರು.

ಕೋವಿಡ್‌-19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ತರಕಾರಿ, ಹಣ್ಣ ಬೆಳೆಗಾರರ ಖಾತೆಗೆ 2,000 ರೂ. ಜಮಾ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. ಈ ಸಂದರ್ಭದಲ್ಲಿ ಪ್ರಶ್ನಿಸಿದ ಸದಸ್ಯರು, ಮಲ್ಲಿಗೆ ಬೆಳೆಗಾರರಿಗೆ ಹೆಕ್ಟೇರಿಗೆ 24 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಭಟ್ಕಳ ತಾಲೂಕಿನಲ್ಲಿ ತುಂಡು ಭೂಮಿಯಲ್ಲಿ ಮಲ್ಲಿಗೆ ಬೆಳೆಯುತ್ತಿದ್ದು, ಅತ್ಯಲ್ಪ ಪರಿಹಾರ ದೊರೆಯುತ್ತಿದ್ದು, ಯಾವುದಕ್ಕೂ ಸಾಲದು ಎಂದರು.

ಇದಕ್ಕೆ ಉತ್ತರಿದ ತಾಪಂ ಅಧ್ಯಕ್ಷರು ಮತ್ತು ಸದಸ್ಯರು, ಮಲ್ಲಿಗೆ ಬೆಳೆಗಾರರಿಗೆ ಕನಿಷ್ಟ 2 ಸಾವಿರ ರೂಪಾಯಿ ಪರಿಹಾರ ನೀಡುವಂತಾಗಬೇಕು. ಭೂಮಿ ಆಧಾರದ ಮೇಲೆ ನೂರು-ಇನ್ನೂರು ರೂಪಾಯಿ ಕೊಡುವುದಕ್ಕಿಂತ ಕೊಡದಿರುವುದೇ ಲೇಸು

Advertisement

ಎಂದರು. ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿ ನೀಡಿದರು. ಕೃಷಿ ಇಲಾಖೆಯಲ್ಲಿ ಬೇಡಿಕೆಯಿದ್ದಷ್ಟು ತಾಡಪತ್ರಿ ಬರುತ್ತಿಲ್ಲ. ನಾರು 5 ಸಾವಿರ ಬೇಡಿಕೆ ಇರುವುದಾಗಿ ಈಗಾಗಲೇ ತಿಳಿಸಲಾಗಿದ್ದು, ಇನ್ನೂ ತನಕ ಸರಕಾರದಿಂದ ಸರಬರಾಜಾಗಿಲ್ಲ ಎಂದು ಆಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಹೆಸ್ಕಾಂನಿಂದ ವಿದ್ಯುತ್‌ ಬಿಲ್‌ ದುಪ್ಪಟ್ಟು ಬಂದಿರುವ ಬಗ್ಗೆ ಸದಸ್ಯರು ಸಹಾಯ ಕಾರ್ಯನಿರ್ವಾಹಕ ಇಂಜಿನಿಯರ್‌ ಮುಂಜುನಾಥ ಅವರಲ್ಲಿ ಪ್ರಶ್ನಿಸಿದಾಗ, ಪಟ್ಟಣದಲ್ಲಿ ಲಾಕ್‌ಡೌನ್‌ ಇರುವ ಮೂರು ತಿಂಗಳ ಬಿಲ್‌ ಒಂದೇ ಬಾರಿ ಬಂದಿದ್ದರಿಂದ ಹೆಚ್ಚು ಎಂದು ಕಾಣುತ್ತದೆ. ಈಗಾಗಲೇ ಹಲವರಿಗೆ ಸಮಜಾಯಿಷಿ ನೀಡಲಾಗಿದ್ದು, ಬಿಲ್‌ ಪಾವತಿಸಲು ಸಮಯಾವಕಾಶ ನೀಡಲಾಗಿದೆ ಎಂದರು.

ಕೆಲವೆಡೆಗಳಲ್ಲಿ ಬಿಲ್‌ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಕುರಿತು ಕೇಳಿದ್ದಕ್ಕೆ ಸಿಬ್ಬಂದಿಗಳಿಗೆ ತಿಳಿಸಿ ಹೇಳುವಂತೆ ಆಗ್ರಹಿಸಲಾಯಿತು.

ಕೋವಿಡ್‌-19 ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ| ಮೂರ್ತಿರಾಜ ಭಟ್ಟ, ಇಲ್ಲಿಯ ತನಕ 2500 ಜನರ ಗಂಟಲ ದ್ರವ ಮಾದರಿಯನ್ನು ಕೋವಿಡ್‌-19 ಪರೀಕ್ಷೆಗಾಗಿ ಕಳುಹಿಸಲಾಗಿದೆ. 55 ಪಾಸಿಟಿವ್‌ ಪ್ರಕರಣ ಇಲ್ಲಿಯ ತನಕ ಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದರು.

ಸಭೆ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಈಶ್ವರ ನಾಯ್ಕ ವಹಿಸಿದ್ದರು. ಉಪಾಧ್ಯಕ್ಷೆ ರಾಧಾ ವೈದ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ತಾಪಂ ಸದಸ್ಯರು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next