ಶಿರಸಿ: ನಮ್ಮ ಆರೋಗ್ಯಕ್ಕೆ ನಾವೇ ಜವಬ್ದಾರರು. ಆದರೆ, ಇಂದು ಆಹಾರ ವ್ಯವಹಾರ, ಹಣ ಗಳಿಕೆಯ ಜೀವನ ಕ್ರಮದಿಂದ ಆರೋಗ್ಯ ಕ್ಷೇತ್ರ ಅಪಾಯದಲ್ಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕಿಸಿದರು.
ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಅಡಿಯಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ತಾಲೂಕು ಮಟ್ಟದ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರ ಆರೋಗ್ಯ ಹದಗೆಟ್ಟಿದೆ. ಜನರ ಆರೋಗ್ಯ ಹೀಗಾದರೆ ಹೇಗೆ ಎಂಬ ಪ್ರಶ್ನೆ ಸರಕಾರಕ್ಕೂ ಕಾಡುತ್ತಿದೆ ಎಂದ ಅವರು ಆಹಾರ ಕ್ರಮ, ಒತ್ತಡ ಜೀವನ ಶೈಲಿ ಹದಗೆಡಲು ಕಾರಣ ಎಂದರು.
ಕೇಂದ್ರದ ಆಯುಷ್ಮಾನ್ ಭಾರತ ಜೊತೆಗೆ ಯಶಸ್ವಿನಿ ಯೋಜನೆ ಕೂಡ ರಾಜ್ಯ ಸರಕಾರ ಆರಂಭಿಸಿ ಜನರಿಗೆ ನೆರವಾಗುತ್ತಿದೆ ಎಂದು ಬಣ್ಣಿಸಿದ ಅವರು, ಜನರ ಆರೋಗ್ಯ ರಕ್ಷಣೆಗೆ ಜನರ ಉತ್ಸಾಹ ಜನರಲ್ಲಿ ಪ್ರಾರಂಭವಾಗಿದೆ. ಆರೋಗ್ಯ ಮೇಳದ ಸೌಲಭ್ಯ ಪಡೆಯಬೇಕು. ಸರಕಾರದಿಂದ 35ಕ್ಕೂ ಅಧಿಕ ಕಾರ್ಯಕ್ರಮ ಇದೆ. ಅದರ ಜಾಗೃತಿ ಮೂಡಿಸುವ ಕಾರ್ಯ ಆಗಿದೆ ಎಂದರು.
ಕೊರೋನಾ ನಾಲ್ಕನೇ ಅಲೆ ಪ್ರಾರಂಭವಾಗಿದೆ. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು. ಒಂದನೇ, ಎರಡನೇ ಲಸಿಕೆ ಪಡೆಯುವ ಜೊತೆಗೆ ಬೂಸ್ಟರ್ ಡೋಸ್ ಕೂಡ ಪಡೆಯಲು ಮುಂದಾಗಬೇಕು. ಇನ್ನೂ ಪ್ರಥಮ ಲಸಿಕೆ ಪಡೆಯದೇ ಇದ್ದರೂ ಕಡ್ಡಾಯವಾಗಿ ಪಡೆಯಬೇಕು ಎಂದೂ ಸಲಹೆ ಮಾಡಿದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ತಹಸೀಲ್ದಾರ ಎಂ.ಆರ್.ಕುಲಕರ್ಣಿ ಇತರರು ಇದ್ದರು. ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳ ತಪಾಸಣೆ ನಡೆಸಲಾಯಿತು.
ಸುಮಂಗಲಾ ನಾಯ್ಕ ಪ್ರಾರ್ಥಿಸಿದರು. ಡಾ. ನಂದಾ ಸ್ವಾಗತಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಕಣ್ಣಿ ಪ್ರಾಸ್ತಾವಿಕ ಮಾತನಾಡಿದರು. ಡಾ. ದಿನೇಶ ಹೆಗಡೆ, ಡಾ. ಜಗದೀಶ ಯಾಜಿ ಇತರರು ಇದ್ದರು.
ಸಣ್ಣ ನಾಲಿಗೆಯ ಮೇಲೆ ಸೆಕೆಂದುಗಳ ಕಾಲ ಆಹಾರ ಇದೆ. ಅದರ ರುಚಿಗಾಗಿ ಆರೋಗ್ಯವನ್ನೇ ಹಾಳು ಮಾಡುಕೊಳ್ಳುತ್ತಿದ್ದೇವೆ.
-ಕಾಗೇರಿ, ಸ್ಪೀಕರ್