Advertisement

ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ತಾಲೂಕು ಆಡಳಿತ ಸನ್ನದ್ಧ

01:48 PM Jul 08, 2023 | Team Udayavani |

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ, ಮಳೆಗೆ ಉಳ್ಳಾಲ ತಾಲೂಕಿನಾದ್ಯಂತ ಅಲ್ಲಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದ್ದು, ಈಗಾಗಲೇ 25ಕ್ಕೂ ಹೆಚ್ಚು ಮನೆಗಳು ಹಾನಿಯಾದರೆ, ಕೃತಕ ನೆರೆ, ಗುಡ್ಡ ಕುಸಿತದಿಂದ ಮನೆ,  ಕೃಷಿಭೂಮಿಗೆ ಹಾನಿಯಾಗಿದ್ದು, ಉಳ್ಳಾಲ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸರ್ವ ಸಿದ್ಧತೆಯನ್ನು ನಡೆಸಲಾಗಿದೆ.

Advertisement

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚನೆಯಂತೆ ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತ ರಾಜು ಕೆ. ಅವರ ಮಾರ್ಗದರ್ಶನದಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್‌ ಪ್ರಭಾಕರ ಖಜೂರೆ ಅವರ ನೇತೃತ್ವದಲ್ಲಿ ಸ್ಥಳಿಯಾಡಳಿತ ಸಂಸ್ಥೆಗಳು ವಿಪತ್ತು ನಿರ್ವಹಣೆಗೆ ಸಿದ್ದತೆಯನ್ನು ನಡೆಸಲಾ ಗಿವೆ.

ಸಮುದ್ರ-ನದಿ
ತಟದಲ್ಲಿ ಮುನ್ನೆಚ್ಚರಿಕೆ
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಕಡಲ್ಕೊರೆತದ ಸಮಸ್ಯೆ ಇದ್ದರೆ ಉಳಿದಂತೆ ನೇತ್ರಾವತಿ ನದಿ ತೀರದ ಗ್ರಾಮಗಳಾದ ಪಾವೂರು, ಹರೇಕಳ, ಅಂಬ್ಲಿಮೊಗರು, ಪೆರ್ಮನ್ನೂರು, ಚೇಳೂರು – ಸಜೀಪ ಪಡು, ಸಜೀಪನಡು, ತಲಪಾಡಿ ಗ್ರಾಮ ಪಂಚಾ ಯತ್‌ನಲ್ಲಿ ಈಗಾಗಲೇ ನದಿ ತಟದಲ್ಲಿರುವ ದೋಣಿ ಮಾಲಕರನ್ನು, ಈಜುಗಾರರ ಸಂಪರ್ಕವನ್ನಿರಿಸಿಕೊಂಡಿದ್ದು, ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವ ಹಣೆಗೆ ಸನ್ನದ್ಧರಿರುವಂತೆ ಸೂಚಿಸಲಾಗಿದೆ. ತಾಲೂಕಿನ ಎಲ್ಲ ಗ್ರಾ.ಪಂ.ಗಳಲ್ಲಿ ಟಾಸ್ಕ್
ಫೋರ್ಸ್‌ ಸಭೆ ನಡೆದಿದ್ದು ಇದರ ಉಸ್ತುವಾರಿ ಯನ್ನು ತಹಶೀಲ್ದಾರ್‌ ಪ್ರಭಾಕರ ಖಜೂರೆ, ತಾಲೂಕು ಪ್ರಭಾರ ಕಾರ್ಯ ನಿರ್ವಹಣಾ ಧಿಕಾರಿ ರಾಜಣ್ಣ, ಕಂದಾಯ ಅಧಿಕಾರಿ ಮಂಜುನಾಥ್‌ ವಹಿಸಿಕೊಂಡಿದ್ದಾರೆ.

ತಾಲೂಕಿಗೆ 22 ಕಾಳಜಿ ಕೇಂದ್ರ
ಉಳ್ಳಾಲ ನಗರಸಭೆ ವ್ಯಾಪ್ತಿಯ ಎರಡು ಗ್ರಾಮಗಳು, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್‌ ಸೇರಿ ಒಟ್ಟು 23 ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪಗಳು ನಡೆದಾಗ ನಿರಾಶ್ರಿತರಿಗೆ ಪೂರಕವಾಗುವಂತೆ ಉಳ್ಳಾದಲ್ಲಿರುವ ವಿಪತ್ತು ನಿರ್ವಹಣಾ ಕೇಂದ್ರ ಸೇರಿದಂತೆ ಒಟ್ಟು 22 ಕಾಳಜಿ ಕೇಂದ್ರವನ್ನು ಗುರುತಿಸಲಾಗಿದೆ. ಉಳ್ಳಾಲದ ಒಂಭತ್ತುಕೆರೆಯಲ್ಲಿರುವ ವಿಪತ್ತು ನಿರ್ವಹಣ ಕೇಂದ್ರದಲ್ಲಿ 500 ನಿರಾಶ್ರಿತರಿಗೆ ವ್ಯವಸ್ಥೆಯಿದ್ದು, ಉಳ್ಳಾಲದ ಮುಕ್ಕಚ್ಚೇರಿ ಶಾಲೆ, ಮೊಗವೀರಪಟ್ಣ ಶಾಲೆ, ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆ ಶಾಲೆ, ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಉಚ್ಚಿಲ ಬೋವಿ ಶಾಲೆ, ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ವಿಷ್ಣುಮೂರ್ತಿ ದೇವ ಸ್ಥಾನ, ಪಾವೂರು ಗ್ರಾಮದಲ್ಲಿ ಇನೋಳಿ ಶಾಲೆ ಮತ್ತು ಗಾಡಿಗದ್ದೆ ಶಾಲೆ, ಅಂಬ್ಲಿಮೊಗರು ಗ್ರಾಮದಲ್ಲಿ ಮದಕ ಅಡು ಸರಕಾರಿ ಶಾಲೆ, ಮುನ್ನೂರು ಗ್ರಾಮದಲ್ಲಿ ಮುನ್ನೂರು ಪ್ರಾಥಮಿಕ ಶಾಲೆ, ಹರೇಕಳ ಗ್ರಾಮದಲ್ಲಿ ರಾಮಕೃಷ್ಣ ಪ್ರೌಡಶಾಲೆ, ಮಂಜನಾಡಿ ಗ್ರಾಮದಲ್ಲಿ ಉರುಮನೆ ಶಾಲೆ, ಚೇಳೂರು – ಸಜೀಪ ಪಡು ಗ್ರಾಮದಲ್ಲಿ ಚೇಳೂರು ಶಾಲೆ ಮತ್ತು ತಲೆಮೊಗರು ಶಾಲೆ, ಸಜೀಪನಡು ಗ್ರಾಮದಲ್ಲಿ ಸಜೀಪ ನಡು ಶಾಲೆ, ಬೋಳಿಯಾರ್‌ ಗ್ರಾಮದಲ್ಲಿ ಅಮ್ಮೆಂಬಳ ಶಾಲೆ, ಪಜೀರು ಗ್ರಾಮದಲ್ಲಿ ರಾಜೀವ ಗಾಂಧಿ ಸಭಾಭವನ, ಕುರ್ನಾಡು ಗ್ರಾಮದಲ್ಲಿ ಭಾರತಿ ಶಾಲೆ ಮುಡಿಪು, ಕೈರಂಗಳ ಗ್ರಾಮದಲ್ಲಿ ಡಿ.ಜಿ.ಕಟ್ಟೆ ಶಾಲೆ, ನರಿಂಗಾನ ಗ್ರಾಮದಲ್ಲಿ ಮೊಂಟೆಪದವು ಶಾಲೆ, ಬಾಳೆಪುಣಿ ಗ್ರಾಮದಲ್ಲಿ ಹೂ ಹಾಕುವ ಕಲ್ಲು ಶಾಲೆ, ತಲಪಾಡಿಯಲ್ಲಿ ಪಟ್ನ ಶಾಲೆಯನ್ನು ಕಾಳಜಿ ಕೇಂದ್ರವಾಗಿ ಗುರುತಿಸಲಾಗಿದ್ದು ಎಲ್ಲ ಕಾಳಜಿ ಕೇಂದ್ರಗಳಿಗೆ ಒಟ್ಟು 20 ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ನೋಡಲ್‌ ಅಧಿಕಾರಿಗಳ ನೇಮಕ
ವಿಪತ್ತು ನಿರ್ವಹಣೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ನೀಡಿದ ಮಾರ್ಗಸೂಚಿಯನ್ನು ಪ್ರತೀ ತಾಲೂಕಿನ ಗ್ರಾಮ ಪಂಚಾಯತ್‌ಗಳು ಮತ್ತು ನೋಡಲ್‌ ಅಧಿಕಾರಿಗಳು ಪಾಲಿಸಿಕೊಂಡು ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಲಾಗಿದೆ. ಕಾಳಜಿ ಕೇಂದ್ರ ಸ್ಥಾಪನೆ ಮತ್ತು ನದಿ ತಟ ಮತ್ತು ಪ್ರಾಕೃತಿಕ ವಿಕೋಪವಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗುವುದು. ಎಲ್ಲ ಅಧಿಕಾರಿಗಳು ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ವಿಪತ್ತು ನಿರ್ವಹಣಾ ತಂಡದಲ್ಲಿದ್ದಾರೆ.
– ರಾಜು ಕೆ., ಸಹಾಯಕ ಆಯುಕ್ತ, ಮಂಗಳೂರು ಉಪ ವಿಭಾಗ

Advertisement

ಸಹಾಯವಾಣಿಗೆ ಕರೆ
ಮಳೆಗಾಲದಲ್ಲಿ ವಿಪತ್ತು ನಿರ್ವಹಣೆಗೆ ಉಳ್ಳಾಲ ತಾಲೂಕು ಸರ್ವ ಸನ್ನದ್ದವಾಗಿದೆ. ಶಾಲೆಗಳಲ್ಲಿರುವ ಕಾಳಜಿ ಕೇಂದ್ರಕ್ಕೆ ಆಯಾಯ ಶಾಲೆಯ ಮುಖ್ಯ ಶಿಕ್ಷಕರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿದ್ದು, ಉಳಿದಂತೆ ನಗರ ಪ್ರದೇಶಗಳಲ್ಲಿ ಮುಖ್ಯಾಧಿಕಾರಿಗಳು ನೋಡಲ್‌ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಕೃತಿಕ ವಿಕೋಪ ಸಂಭವಿಸಿದ ತತ್‌ಕ್ಷಣ ತಾಲೂಕಿನ ಸಹಾಯವಾಣಿ ಕೇಂದ್ರದ ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು.
– ಪ್ರಭಾಕರ ಖಜೂರೆ, ತಹಶೀಲ್ದಾರ್‌, ಉಳ್ಳಾಲ ತಾಲೂಕು

ಪ್ರಾಕೃತಿಕ ವಿಕೋಪ ನಿಧಿ ಬಿಡುಗಡೆ
ಪ್ರಾಕೃತಿಕ ವಿಕೋಪಗಳಲ್ಲಿ ಪ್ರಾಣ, ಮನೆ ಹಾನಿ ಸೇರಿದಂತೆ ತುರ್ತು ಕಾರ್ಯಗಳಿಗೆ ಉಳ್ಳಾಲ ತಾಲೂಕಿಗೆ ಮೊದಲ ಹಂತದಲ್ಲಿ 25 ಲಕ್ಷ ರೂ. ಬಿಡುಗಡೆಯಾಗಿದ್ದು, ಪ್ರಾಕೃತಿಕ ವಿಕೋಪದ ನಷ್ಟ ಅಂದಾಜಿನಂತೆ ಹಣ ಬಿಡುಗಡೆಯಾಗಲಿದೆ. ತಾಲೂಕಿನಲ್ಲಿ 24 ಗಂಟೆಗಳ ಕಾಲ ನಿರಂತರ ಸೇವೆ ಲಭ್ಯವಿದ್ದು, ವಿಕೋಪ ನಡೆದರೆ ತಾಲೂಕು ಕಚೇರಿ ಸಂಪರ್ಕ ಸಂಖ್ಯೆ 0824- 2204424 ನ್ನು ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next