ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಮೀಸಲು ಅರಣ್ಯಪ್ರದೇಶಕ್ಕೆ ಒಳಪಟ್ಟಿರುವ ಸ್ಥಳದಲ್ಲಿ ಸಂಗಾಪುರ ತಾಂಡಾದ ವ್ಯಕ್ತಿಯೊಬ್ಬ ಅರಣ್ಯ ಕಾಯ್ದೆ ಉಲ್ಲಂಘಿಸಿ ನಿರ್ಮಿಸಿದ ಮನೆಯನ್ನು ಕುಂಚಾವರಂ ವನ್ಯಜೀವಿಧಾಮ ಅರಣ್ಯ ಇಲಾಖೆ ಸಿಬ್ಬಂದಿ ಕೆಡವಿದ್ದಕ್ಕೆ ಸಂಗಾಪುರ ತಾಂಡಾ ನಿವಾಸಿಗಳು ಮತ್ತು ಅರಣ್ಯ ಸಿಬ್ಬಂದಿ ಮಧ್ಯೆ ಮಂಗಳವಾರ ಬೆಳಗಿನ ಜಾವ ಮಾತಿನ ಚಕಮಕಿ ನಡೆಯಿತು.
ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದ ಸರ್ವೇ ನಂ.2ರಲ್ಲಿ ಒಳಪಟ್ಟಿರುವ ಜಾಗದಲ್ಲಿ ಸಂಗಾಪುರ ತಾಂಡಾದ ಕಿಶನ್ ಸೇವು ರಾಠೊಡ ಎನ್ನುವಾತ ಕಳೆದ ಮೂರು ವರ್ಷಗಳಿಂದ ಅರಣ್ಯ ಕಾಯ್ದೆ ಉಲ್ಲಂಘಿಸಿ ಮನೆ ಕಟ್ಟುತ್ತಿದ್ದ. ಈ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದರು. ಆದರೆ ಕಿಶನ್ ರಾತ್ರಿ ವೇಳೆ ಕಾರ್ಮಿಕರನ್ನು ಬಳಸಿಕೊಂಡು ಮನೆ ಗೋಡೆ ಕಟ್ಟುತ್ತಿದ್ದ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮನೆಯ ನಿರ್ಮಾಣಕ್ಕೆ ಬಳಸಿದ ಕಿಟಕಿ ಬಾಗಿಲುಗಳನ್ನು ತೆಗೆದು ಹಾಕಿದ್ದರು.
ಮಂಗಳವಾರ ಸಂಗಾಪುರ ತಾಂಡಾದ ಪ್ರಮುಖರಾದ ದಶರಥ, ವಿಜಯ ಜಾಧವ, ರೂಪಸಿಂಗ್ ಚವ್ಹಾಣ ಎನ್ನುವರು ಈ ಕುರಿತು ಕುಂಚಾವರಂ ವನ್ಯಜೀವಿಧಾಮ ಇಲಾಖೆ ಎದುರು ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಪಕ್ಕದಲ್ಲಿಯೇ ಇದ್ದ ಕುಂಚಾವರಂ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ತಾಂಡಾದ ಪ್ರಮುಖ ರವಿಕುಮಾರ ಜಾಧವ ಮಾತನಾಡಿ, ಕುಂಚಾವರಂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಣ ನೀಡಿದರೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಆಪಾದಿಸಿದರು.
ಸಂಗಾಪುರ ತಾಂಡಾದ ಬಳಿ ಇರುವ ಜಾಗದಲ್ಲಿ ಮನೆ ನಿರ್ಮಿಸದಂತೆ ಅನೇಕ ಸಲ ಕಿಶನ್ ರಾಠೊಡಗೆ ಎಚ್ಚರಿಕೆ ನೀಡಲಾಗಿದೆ. ಆದರೂ ಸಹ ಅರಣ್ಯ ಕಾಯ್ದೆ ವಿರುದ್ಧ ಮನೆ ಕಟ್ಟುತ್ತಿರುವುದರಿಂದ ಅರಣ್ಯ ಇಲಾಖೆ ಕಾನೂನು ಉಲ್ಲಂಘನೆ ಮಾಡಿದಂತೆ ಆಗಿದೆ. ಹೀಗಾಗಿ ಕಿಶನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕುಂಚಾವರಂ ವನ್ಯಜೀವಿಧಾಮ ಇಲಾಖೆ ಎದುರು ಮಾತಿನ ಚಕಮಕಿ ನಡೆದ ಸಂದರ್ಭದಲ್ಲಿ ಕುಂಚಾವರಂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ಗಂಭೀರವಾಗಿದೆ. ಆದ್ದರಿಂದ ಸಂಗಾಪುರ ತಾಂಡಾದ ಕೆಲವು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
-ಸಂಜೀವಕುಮಾರ ಚವ್ಹಾಣ, ವಲಯ ಅರಣ್ಯಾಧಿಕಾರಿ, ವನ್ಯಜೀವಿಧಾಮ ಇಲಾಖೆ, ಕುಂಚಾವರಂ