ಮೈಸೂರು: ಪ್ರಜ್ವಲ್ ರೇವಣ್ಣ ಹೇಳಿರುವಂತೆ ನಮ್ಮ ಪಕ್ಷದಲ್ಲಿ ಕೆಲವರು ಸೂಟ್‌ಕೇಸ್ ರಾಜಕಾರಣ ಮಾಡುತ್ತಿದ್ದುದು ನಿಜ, ಅಂಥವರೇ ಮುಂದೆ ಕುಳಿತು ಕೊಳ್ಳುತ್ತಿದ್ದುದೂ ನಿಜ. ಆದರೆ, ಈಗ ಅವರ್ಯಾರು ನಮ್ಮ ಪಕ್ಷದಲ್ಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಭಿನ್ನಮತೀಯ ಶಾಸಕರಿಗೆ ಟಾಂಗ್ ನೀಡಿದರು.
ನಗರದ ಸಾ.ರಾ.ಕನ್ವೆನನ್ ಹಾಲ್‌ನಲ್ಲಿ ಸೋಮವಾರ ನಡೆದ ವಿಶ್ರಾಂತ ಕುಲಪತಿ ಪೊ›.ಕೆ.ಎಸ್.ರಂಗಪ್ಪ ಹಾಗೂ ಕೆಪಿಎಸ್‌ಸಿ ಮಾಜಿ ಸದಸ್ಯ ಪೊ›.ಎಚ್. ಗೋವಿಂದಯ್ಯ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜ್ವಲ್ ಹೇಳಿಕೆಯಿಂದ ನನಗೆ ಅಸಮಾಧಾನ ಆಗಿಲ್ಲ. ಹೀಗಾಗಿ ಪ್ರಜ್ವಲ್ ನನ್ನನ್ನು ಭೇಟಿ ಮಾಡಬೇಕಾದ ಅವಶ್ಯಕತೆಯೇ ಇಲ್ಲ ಎಂದರು.
ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲ ನಾಯಕರೂ ಒಟ್ಟಾಗಿಯೇ ಇದ್ದಾರೆ, ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಇದೆ ಎಂಬುದು ಕೆಲವರ ಸೃಷ್ಟಿ ಎಂದು ಹೇಳಿದರು. ಪ್ರಜ್ವಲ್ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿಲ್ಲ. ನಮ್ಮಲ್ಲಿ ಸೂಟ್‌ಕೇಸ್ ರಾಜಕಾರಣ ಮಾಡುವವರು ಈ ಮೊದಲು ಇದ್ದರು, ಅವರನ್ನು ನೆನಪಿಸಿಕೊಂಡು ಪ್ರಜ್ವಲ್ ಇಂತಹ ಹೇಳಿಕೆ ನೀಡಿರಬಹುದು. ಆದರೆ, ಅವರ್ಯಾರು ಈಗ ನಮ್ಮ ಪಕ್ಷದಲ್ಲಿಲ್ಲ ಎಂದರು.
ಶಾಸಕ ಜಮೀರ್ ಆಹಮದ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನೀವೇನು ಸೂಟ್‌ಕೇಸ್ ತೆಗೆದುಕೊಳ್ಳದೆ ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕಿದ್ದೀರಾ? ನೀವೆಲ್ಲಾ ಎಲ್ಲಿದ್ರಿ? ಹೇಗೆ ಮುಂದೆ ಬಂದ್ರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದರು. ಸೂಟ್‌ಕೇಸ್ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತವಿರಲಿ, ಬಾಯಿಗೆ ಬಂದಂತೆ ಮಾಧ್ಯಮಗಳ ಮುಂದೆ ಹಗುರವಾಗಿ ಮಾತನಾಡಿದರೆ ಸುಮ್ಮನಿರಲ್ಲ.
ಸೂಟ್‌ಕೇಸ್ ವಿಚಾರವಾಗಿ ಎಲ್ಲಿ ಬೇಕಾದರೂ ಚರ್ಚೆಗೆ ಬರಲು ಸಿದ್ಧನಿದ್ದೇನೆ, ಎಚ್.ಡಿ.ದೇವೇಗೌಡರ ಮಗನಾಗಿ ನಿಮಗೆಲ್ಲಾ ಹೆದರುತ್ತೀನಾ, ನಾನು ನಮ್ಮಪ್ಪನಿಂದ ರಾಜಕೀಯ ಕಲಿತಿದ್ದೇನೆ, ಮಾಧ್ಯಮಗಳ ಮುಂದೆ ನಮ್ಮ ಹುಡುಗನ ಬಗ್ಗೆ ಕನಿಕರದ ಮಾತುಗಳನ್ನಾಡುತ್ತೀರಿ, ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕುವಾಗ ಎಲ್ಲಿ ಹೋಗಿತ್ತು ಈ ಕನಿಕರ ಎಂದು ಪ್ರಶ್ನಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ, ರಾಜ್ಯ ವಿಧಾನಸಭೆಗೆ ಅವಧಿಗೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ನವೆಂಬರ್ ವೇಳೆಗೆ ವಿಧಾನಸಭೆ ಚುನಾವಣೆ ಎದುರಾಗಬಹುದು. ಚುನಾವಣೆಗಾಗಿ ರಾಜ್ಯಸರ್ಕಾರ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಜೆಡಿಎಸ್ ಕೂಡ ಚುನಾವಣೆ ಎದುರಿಸಲು ಸಜಾjಗಬೇಕಿದೆ ಎಂದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯಲು ಮಾಧ್ಯಮಗಳ ಸಹಕಾರವೂ ಅಗತ್ಯ ಎಂದ ಅವರು, ಮುಂಬರುವ ದಿನಗಳಲ್ಲಿ ಮೈಸೂರು, ಚಾಮರಾಜ ನಗರ ಭಾಗದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ, ಇದಕ್ಕೆ ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದಿರುವ ಎಚ್.ವಿಶ್ವನಾಥ್ ಹಾಗೂ ಪೊ›.ರಂಗಪ್ಪ ಅವರ ಜವಾಬ್ದಾರಿ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ಮಾಜಿ ಸಂಸದ ಎಚ್.ವಿಶ್ವನಾಥ್, ಮಾಜಿ ಸಚಿವ ಬಸವರಾಜ ಹೊರಟ್ಟಿ, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.