Advertisement

ನಗರಸಭೆಯಲ್ಲಿ ಕುಡಿಯುವ ನೀರಿನದ್ದೇ ಚರ್ಚೆ

08:19 AM Jan 15, 2019 | Team Udayavani |

ಹರಿಹರ: ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಚರ್ಚೆ ಜೋರಾಗಿ ನಡೆಯಿತು.

Advertisement

ಶಂಕರ್‌ ಖಟಾವಕರ್‌ ಮಾತನಾಡಿ, ಬರುವ ಬೇಸಿಗೆಗೆ ನೀರಿನ ಸಮಸ್ಯೆ ನಿವಾರಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ನೀರಿನ ಸಮಸ್ಯೆಯಿದೆ ಎಂಬುದನ್ನು ಗುರುತಿಸಿ, ಕೆಟ್ಟಿರುವ ಕೊಳವೆ ಬಾವಿ ದುರಸ್ತಿ ಮಾಡಬೇಕು. ತುರ್ತಾಗಿ ನೀರಿನ ಬವಣೆ ನೀಗಿಸಲು ಕೈಗೊಳ್ಳಬೇಕಿರುವ ಕ್ರಮ ಹಾಗೂ ಅಗತ್ಯ ಅನುದಾನ ಕುರಿತು ಡಿಸಿ ಬಳಿ ನಿಯೋಗದಲ್ಲಿ ತೆರಳಿ ಚರ್ಚಿಸಬೇಕು ಎಂದರು.

ಬಿ.ರೇವಣಸಿದ್ದಪ್ಪ, ಅಕ್ಕಪಕ್ಕದ ವಾರ್ಡ್‌ಗಳಲ್ಲಿ ಪರಸ್ಪರ ನೀರನ್ನು ಹಂಚಿಕೊಳ್ಳಬೇಕು ಎಂದಾಗ, ನಿಂಬಕ್ಕ ಚಂದಾಪುರ್‌, ನಮ್ಮ ವಾರ್ಡ್‌ಗೆ ಒಂದು ನಲ್ಲಿ ಕೇಳಿದರೆ ನೀವು ಕೊಟ್ಟಿಲ್ಲ. ಮಾತನಾಡುವುದಷ್ಟೇ ಅಲ್ಲ, ಅದರಂತೆ ನಡೆಯಬೇಕು ಎಂದರು. ಸಿಗ್ಬತ್‌ ಉಲ್ಲಾ, ನಮ್ಮ ವಾರ್ಡ್‌ನ ಕೊಳವೆ ಬಾವಿಯಿಂದ ನೀರು ಪಂಪ್‌ ಮಾಡಿಕೊಳ್ಳುತ್ತಿದ್ದರೂ ಸದಸ್ಯ ವಾಮನಮೂರ್ತಿ ಅಲ್ಲಿಂದ ಒಂದು ನಲ್ಲಿ ಸಂಪರ್ಕ ಕೂಡ ಕೊಡಲಿಲ್ಲ ಎಂದು ಆರೋಪಿಸಿದರು.

ಸೈಯದ್‌ ಎಜಾಜ್‌ ಮಾತನಾಡಿ, ಜಲಸಿರಿ ಕಾಮಗಾರಿಗೆ ದಿನದ 24 ಗಂಟೆ ಪೂರೈಸಲು ನೀರನ್ನು ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದಾಗ, ಪೌರಯುಕ್ತೆ ಎಸ್‌.ಲಕ್ಷ್ಮಿ, ನಗರದ ಕೊಳವೆ ಬಾವಿಗಳ ನೀರನ್ನೇ ಒಟ್ಟುಗೂಡಿಸಿ ಜಲಸಿರಿ ಮಾರ್ಗಕ್ಕೆ ಹರಿಸಲಾಗುವುದು ಎಂದರು.

ಪೌರಾಯುಕ್ತರಿಗೆ ತರಾಟೆ: ಸದಸ್ಯ ಸಿಗ್ಬತ್‌ ಉಲ್ಲಾ ಮಾತನಾಡಿ, ಮಾಜಿ ಶಾಸಕರೆದುರು ಹೋರಾಟ ಮಾಡಿ ನಗರೋತ್ಥಾನ ಯೋಜನೆಯಡಿ 80 ಲಕ್ಷ ಮಂಜೂರು ಮಾಡಿಸಿದ್ದು, ಟೆಂಡರ್‌ ಮುಗಿದು ವರ್ಷವೇ ಗತಿಸಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಗುತ್ತಿಗೆದಾರರ ಮೇಲೆ ನಿಮಗೇಕೆ ಕರುಣೆ ಎಂದು ಪ್ರಶ್ನಿಸಿದರು.

Advertisement

ಅದಕ್ಕೆ ಗರಂ ಆದ ಪೌರಾಯುಕ್ತರು, ಮಿಲಾಪಿ ಏನೂ ಇಲ್ಲ, ಇದೆಲ್ಲಾ ಡಿಸಿಗೆ ಸಂಬಂಧಿಸಿದ್ದು. 13 ಪ್ಯಾಕೇಜ್‌ಗಳಲ್ಲಿ 8ರ ಕಾಮಗಾರಿ ನಡೆಯುತ್ತಿದೆ. ನೀವೇನು ಲಿಖೀತವಾಗಿ ಮನವಿ ಸಲ್ಲಿಸಿಲ್ಲ ಎಂದಾಗ, ಸಿಗ್ಬತ್‌ ಉಲ್ಲಾ ಕಳೆದ ಒಂದು ವರ್ಷದಿಂದ ಕೇಳುತ್ತಿದ್ದೇನೆ. ಲಿಖೀತ ಮನವಿ ಕೇಳಿದ್ದರೆ ಆಗಲೇ ಕೊಡುತ್ತಿದ್ದೆ. ಚುನಾವಣೆ ಸಮೀಪಿಸಿದ್ದು, ಮತದಾರರಿಗೆ ಏನೆಂದು ಉತ್ತರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಹಸ್ತಕ್ಷೇಪ ಸರಿಯಲ್ಲ: ಶಾಸಕರು ಸೂಚಿಸಿದ ಕಾಮಗಾರಿಗಳಿಗೆ ಕಳೆದ ಸಭೆಯಲ್ಲಿ 67 ಲಕ್ಷ ರೂ. ಅನುಮೋದಿಸಿರುವುದು ನಗರಸಭೆ ಸದಸ್ಯರಿಗೆ ಅಪಮಾನವೆಸಗಿದಂತೆ. ನಗರಸಭೆಯಲ್ಲಿ ಶಾಸಕರ ಹಸ್ತಕ್ಷೇಪ ಸರಿಯಲ್ಲ ಎಂದು ವಾಮನಮೂರ್ತಿ ನುಡಿದರು. ಅದಕ್ಕೆ ತಿರುಗೇಟು ನೀಡಿದ ಸಿಗ್ಬತ್‌ ಉಲ್ಲಾ, ಹಿಂದಿನ ಶಾಸಕರು ನಗರಸಭೆ ಆಡಳಿತದಲ್ಲಿ ಎಷ್ಟು ಹಸ್ತಕ್ಷೇಪ ಮಾಡಿದ್ದಾರೆ. ಅದೆಷ್ಟು ಅನುದಾನ ಹಳ್ಳಕ್ಕೆ, ಚರಂಡಿಗೆ ಹಾಕಿದ್ದಾರೆಂಬುದು ಎಲ್ಲರಿಗೂ ಗೊತ್ತು ಎಂದರು.

ಜಲಸಿರಿ ತಡೆಯುತ್ತೇವೆ: ನಾಗರಾಜ್‌ ಮೆಹರ್ವಾಡೆ ಮಾತನಾಡಿ, ಜಲಸಿರಿ ಯೋಜನೆ ಕಾಮಗಾರಿ ಕಳಪೆ ಹಾಗೂ ಬೇಕಾಬಿಟ್ಟಿಯಾಗಿ ಕೈಗೊಂಡಿದ್ದು, ದುಡ್ಡು ಮಾಡಿಕೊಳ್ಳಲು ನಡೆಸಿರುವ ಕಾಟಾಚಾರದ ಈ ಕಾಮಗಾರಿಯನ್ನು ತಡೆಯುವುದಾಗಿ ಎಚ್ಚರಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸೈಯದ್‌ ಏಜಾಜ್‌, ವಾರ್ಡ್‌ ಸದಸ್ಯರೊಂದಿಗೆ ಚರ್ಚಿಸದೆ ಮನಬಂದಲ್ಲಿ ಪೈಪ್‌ ಅಳವಡಿಸುತ್ತಾರೆ ಎಂದರೆ, ಅಲ್ತಾಫ್‌ ಮಾತನಾಡಿ, ಜಲಸಿರಿಯಿಂದ ಹಳೆಯ ಪೈಪ್‌ಗ್ಳು ಡ್ಯಾಮೇಜ್‌ ಆಗಿ ಜನರಿಗೆ ನೀರು ಸಿಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಪೈಪುಗಳ ದುರಸ್ತಿ ಮಾಡದಿದ್ದರೆ ಕಾಮಗಾರಿ ನಿಲ್ಲಿಸುವುದಾಗಿ ಎಚ್ಚರಿಸಿದರು.

ಮೊಹ್ಮದ್‌ ಸಿಗ್ಬತ್‌ಉಲ್ಲಾ ಮಾತನಾಡಿ, ನನ್ನ ವಾರ್ಡ್‌ನಲ್ಲಿನ ಬಹುತೇಕ ರಸ್ತೆಗಳು ಜಲಸಿರಿ ಕಾಮಗಾರಿಯಿಂದಾಗಿ ಹಾಳಾಗಿವೆ. ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿದ ರಸ್ತೆಗಳು ಮಣ್ಣುಪಾಲಾಗಿವೆ. ಜನರಿಂದ ಬೆ„ಸಿಕೊಳ್ಳುವುದಕ್ಕಿಂತ ಈ ಯೋಜನೆ ಸ್ಥಗಿತಗೊಳಿಸುವುದು ಒಳಿತು ಎಂದರು.

ಸದಸ್ಯ ವಸಂತ್‌ ಮಾತನಾಡಿ, ಬರ ಪರಿಹಾರ, ಶುದ್ಧ ಕುಡಿಯುವ ನೀರು ಸೇರಿದಂತೆ ಸಂಪನ್ಮೂಲಗಳು ನಗರದ ಎಲ್ಲಾ 31 ವಾರ್ಡ್‌ಗಳಿಗೆ ಸಮಾನವಾಗಿ ದೊರೆಯುವಂತಾಗಬೇಕು ಎಂದರು. ವಿದ್ಯುತ್‌ ಇಲ್ಲದಾಗ ನಗರಸಭೆ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ 7 ಲಕ್ಷ ವೆಚ್ಚದಲ್ಲಿ ಜನರೇಟರ್‌ ಖರೀದಿಸಲು ನಿರ್ಣಯಿಸಲಾಯಿತು.

ಉಪಾಧ್ಯಕ್ಷೆ ಅಂಜನಮ್ಮ, ಅತಾವುಲ್ಲಾ, ರಾಜು ರೋಖಡೆ, ಡಿ.ಉಜೇಶ್‌, ಕೆ.ವಿರೂಪಾಕ್ಷ, ಕೆ.ಮರಿದೇವ್‌, ಪ್ರತಿಭಾ ಕುಲಕರ್ಣಿ, ಬಿ.ಅಲ್ತಾಫ್‌, ಸೆ„ಯದ್‌ ಜಹೀರ್‌ ಅಲ್ತಮಷ್‌, ಮಂಜುಳಾ, ಶಹಜಾದ್‌ ಮತ್ತಿತರರಿದ್ದರು.

ಬೇಸಿಗೆಯಲ್ಲಿ ಬಾಯಿ ಜೋರು ಮಾಡುವ ಪುರುಷ ಸದಸ್ಯರ ವಾರ್ಡ್‌ಗಳಿಗಷ್ಟೇ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತದೆ. ಮಹಿಳೆಯರು ಸದಸ್ಯರಲ್ಲವೇ? ಏಕೆ ಈ ತಾರತಮ್ಯ? ಬರುವ ಬೇಸಿಗೆಯಲ್ಲಿ ಇದಕ್ಕೆ ಆಸ್ಪದ ಕೊಡುವುದಿಲ್ಲ.
ನಗೀನಾ ಸುಬಾನ್‌, ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next