Advertisement

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

07:42 PM Sep 27, 2021 | Team Udayavani |

ಮುದ್ದೇಬಿಹಾಳ: ಮಿಣಜಗಿ, ಹೂವಿನ ಹಿಪ್ಪರಗಿ ಭಾಗದಿಂದ ತಾಳಿಕೋಟೆ ಪ್ರವೇಶಿಸುವ ಡೋಣಿ ನದಿಯ ಮೇಲಿನ ದಶಕಗಳಷ್ಟು ಹಳೇಯದಾದ ಸೇತುವೆಯ ಅಂದಾಜು 15 ಮೀಟರ್ನಷ್ಟು ಭಾಗ ಕುಸಿಯತೊಡಗಿದ್ದು, ಅದರ ಮುಂದಿನ ಭಾಗವೂ ನಿಧಾನವಾಗಿ ಕುಸಿಯತೊಡಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಭವನೀಯ ಅನಾಹುತ ತಪ್ಪಿಸಲು ಸೇತುವೆಯ ಮೇಲೆ ಸಂಚಾರವನ್ನು ಸೋಮವಾರ ಸಂಜೆಯಿಂದಲೇ ಬಂದ್ ಮಾಡಲಾಗಿದೆ. ಇದರಿಂದಾಗಿ ಮುದ್ದೇಬಿಹಾಳ, ಹೂವಿನ ಹಿಪ್ಪರಗಿ ಮತ್ತು ಮಿಣಜಗಿ ಭಾಗದಿಂದ ತಾಳಿಕೋಟೆ ಪ್ರವೇಶ ಬಂದ್ ಆಗಿದೆ.

Advertisement

ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮತ್ತು ಪಿಡಬ್ಲೂಡಿ ಇಲಾಖೆಯ ವಿಜಯಪುರ, ಬೆಳಗಾವಿ ಕಚೇರಿಗಳ ಹಿರಿಯ ಅಧಿಕಾರಿಗಳು ಸೋಮವಾರ ಸಂಜೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಶಾಸಕರ ಮನವಿಯ ಮೇರೆಗೆ ಪಿಡಬ್ಲೂಡಿಯ ಬೆಂಗಳೂರು ಕಚೇರಿಯ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಸದ್ಯ ಸೇತುವೆ ಮೇಲೆ ಸಂಚಾರ ಬಂದ್ ಮಾಡಿದ್ದರಿಂದ ಪರದಾಟ ಕಂಡುಬರತೊಡಗಿದೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಸೇತುವೆ ಪಕ್ಕದಲ್ಲಿರುವ ನೆಲಮಟ್ಟದ ಹಳೇಯ ರಸ್ತೆಯನ್ನೇ ಸಂಚಾರಕ್ಕೆ ದುರಸ್ತಿ ಪಡಿಸಲು ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ.

ಮುದ್ದೇಬಿಹಾಳ ಸಿಪಿಐ ಆನಂದ ವಾಘ್ಮೋಡೆ ನೇತೃತ್ವದಲ್ಲಿ ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸೈ ವಿನೋದ ದೊಡಮನಿ ಮತ್ತು ಪೊಲೀಸರು ಸೇತುವೆ ಬಳಿ ಪಿಡಬ್ಲೂಡಿ ಅಧಿಕಾರಿಗಳೊಂದಿಗೆ ಬೀಡು ಬಿಟ್ಟಿದ್ದು ಪ್ರಯಾಣಿಕರನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

Advertisement

ಸೇತುವೆಯ ಮೇಲಿನ ಈ ರಸ್ತೆಯು ತಾಳಿಕೋಟೆ ಮೂಲಕ ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳನ್ನು ಸಂಪರ್ಕಿಸುವುದರಿಂದ, ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗಕ್ಕೂ ಸಂಪರ್ಕಿಸುವುದರಿಂದ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳ ಸಂಚಾರ ಇದ್ದು ಸೇತುವೆ ಮೇಲೆ ಸಂಚಾರ ಬಂದ್ ಆಗಿದ್ದರಿಂದ ಪರದಾಟ ಉಂಟಾಗಿದೆ.

ಶಾಸಕ ನಡಹಳ್ಳಿಯವರು ಸೇತುವೆ ಪರಿಸ್ಥಿತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಸಾರ್ವಜನಿಕರ ಜೀವ ರಕ್ಷಣೆಯು ಮಹತ್ವದ್ದಾಗಿರುವುದರಿಂದ ಸೇತುವೆ ಮೇಲಿನ ಸಂಚಾರವನ್ನು ತಕ್ಷಣದಿಂದಲೇ ನಿರ್ಬಂಧಿಸಲು ಕ್ರಮ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮತ್ತು ಸೇತುವೆ ದುರಸ್ತಿಗೆ ಶಾಸ್ವತ ಕ್ರಮ ಕೈಕೊಳ್ಳುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next