ಕಾಬೂಲ್: 2021 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅಫ್ಘಾನಿಸ್ಥಾನದ ಮಹಿಳೆಯರ ಸ್ವಾತಂತ್ರ್ಯವನ್ನು ಮತ್ತಷ್ಟು ನಿರ್ಬಂಧಿಸಿರುವ ತಾಲಿಬಾನ್ ಇತ್ತೀಚಿನ ಆದೇಶದಲ್ಲಿ ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಗಟ್ಟಿಯಾಗಿ ಪ್ರಾರ್ಥಿಸುವುದನ್ನು ನಿಷೇಧಿಸುವ ವಿಲಕ್ಷಣ ನಿಯಮವನ್ನು ಹೊರಡಿಸಿದೆ.
ತಾಲಿಬಾನ್‌ನ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವ ಖಾತೆಯ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಈ ಘೋಷಣೆ ಮಾಡಿದ್ದು. ಮಹಿಳೆಯ ಧ್ವನಿಯನ್ನು “ಅವ್ರಾ” ಎಂದು ಪರಿಗಣಿಸಲಾಗುತ್ತದೆ, ಅದು ಸಾರ್ವಜನಿಕವಾಗಿ ಕೇಳಬಾರದು, ಇತರ ಮಹಿಳೆಯರು ಸಹ ಕೇಳಬಾರದು ಎಂದು ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಮಹಿಳೆಯರು ಇತರ ಮಹಿಳೆಯರ ಜತೆಯಲ್ಲಿದ್ದಾಗಲೂ ಕುರಾನ್ ಅನ್ನು ಶ್ರವ್ಯವಾಗಿ ಪಠಿಸಬಾರದು ಎಂದು ಹನಫಿ ಪ್ರತಿಪಾದಿಸಿದ್ದಾನೆ. “ಮಹಿಳೆಯರಿಗೆ ತಕ್ಬೀರ್ ಅಥವಾ ಅಜಾನ್ ಎಂದು ಕರೆಯಲು ಅವಕಾಶವಿಲ್ಲದಿದ್ದರೆ, ಅವರು ಖಂಡಿತವಾಗಿಯೂ ಹಾಡುಗಳನ್ನು ಹಾಡಲು ಅಥವಾ ಸಂಗೀತವನ್ನು ಆನಂದಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾನೆ.
ಆದೇಶವು ಮಹಿಳೆಯರ ಪ್ರಾರ್ಥನೆಯ ಮೇಲೆ ಕೇಂದ್ರೀಕೃತವಾಗಿದ್ದು, ತಜ್ಞರು ಇಂತಹ ನಿಯಮಗಳು ಸಾರ್ವಜನಿಕವಾಗಿ ಮುಕ್ತವಾಗಿ ಮಾತನಾಡುವ ಮತ್ತು ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಆಫ್ಘಾನ್ ಮಹಿಳೆಯರ ಸಾಮರ್ಥ್ಯವನ್ನು ಮತ್ತಷ್ಟು ನಿರ್ಬಂಧಿಸಬಹುದು ಎಂದು ಆತಂಕ ಹೊರ ಹಾಕಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಆಫ್ಘಾನ್ ಕಾರ್ಯಕರ್ತರು ತಾಲಿಬಾನ್‌ನ ಇತ್ತೀಚಿನ ಆದೇಶವನ್ನು ತೀವ್ರವಾಗಿ ಖಂಡಿಸಿದ್ದಾರೆ, ಈ ಕ್ರಮವನ್ನು “ಲಿಂಗ ವರ್ಣಭೇದ ನೀತಿ” ಎಂದು ಆಕ್ರೋಶ ಹೊರ ಹಾಕಿದ್ದಾರೆ.