ಕಾಬೂಲ್: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಮತ್ತು ಪಂಜ್ ಶೀರ್ ಯೋಧರ ನಡುವಿನ ಹೋರಾಟ ಜಾರಿಯಲ್ಲಿದೆ. ಅನಿರೀಕ್ಷಿತ ವೇಗದಲ್ಲಿ ಕಾಬೂಲ್ ನ್ನು ವಶಕ್ಕೆ ಪಡೆದಿದ್ದ ತಾಲಿಬಾನ್ ಉಗ್ರರಿಗೆ ಪಂಜ್ ಶೀರ್ ಕಣಿವೆ ಮಾತ್ರ ದುಸ್ವಪ್ನವಾಗಿದೆ ಕಾಡಿದೆ. ಈ ಪ್ರಾಂತ್ಯವನ್ನು ವಶಪಡಿಸಿಕೊಂಡು ಸಂಪೂರ್ಣ ಅಫ್ಘಾನಿಸ್ಥಾನದಲ್ಲಿ ಅಧಿಕಾರ ಸ್ಥಾಪಿಸಲು ತಾಲಿಬಾನ್ ಹರಸಾಹಸ ಪಡುತ್ತಿದೆ.
ಪಂಜ್ ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದೆ. ಅಹ್ಮದ್ ಮಸೌದ್ ನೇತೃತ್ವದಲ್ಲಿ ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆ ಹೋರಾಟ ನಡೆಸುತ್ತಿದೆ. ‘’ತಾವು ಪಂಜ್ ಶೀರ್ ಪ್ರಾಂತ್ಯದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ, ಸಂಪೂರ್ಣ ಅಫ್ಘಾನ್ ನಮ್ಮ ವಶವಾಗಿದೆ’’ ಎಂದು ತಾಲಿಬಾನ್ ಶುಕ್ರವಾರ ರಾತ್ರಿ ಹೇಳಿಕೊಂಡಿತ್ತು. ಆದರೆ ಇದನ್ನು ಅಹ್ಮದ್ ಮಸೌದ್ ಮಾತ್ರ ಇದನ್ನು ನಿರಾಕರಿಸಿದ್ದರು.
ಇದನ್ನೂ ಓದಿ:ಇಬ್ಬರು ಯುವತಿಯರ ಮುದ್ದಿನ ಲವರ್: ‘ಟಾಸ್’ ಮೂಲಕ ವಧುವಿನ ನಿರ್ಣಯ, ಆದರೆ ಆಗಿದ್ದೇ ಬೇರೆ!
ಪಂಜಶೀರ್ ನ ಶುತುಲ್ ಜಿಲ್ಲೆಯನ್ನು ವಶಪಡಿಸಿಕೊಂಡ ನಂತರ ತಾವು ಅನಾಬಾ ಜಿಲ್ಲೆಗೆ ಪ್ರವೇಶಿಸಿದ್ದೇವೆ ಎಂದು ತಾಲಿಬಾನ್ ಹೇಳಿಕೊಂಡಿದೆ ಎಂದು ಅಶ್ವಕ ನ್ಯೂಸ್ ಏಜೆನ್ಸಿ ಹೇಳಿದೆ. ಖಿಂಜ್ ಮತ್ತು ಉನಾಬಾ ಜಿಲ್ಲೆಗಳನ್ನು ವಶಕ್ಕೆ ಪಡೆಯಲಾಗಿದೆ, ತಾಲಿಬಾನ್ ಪಡೆಗಳು ಪಂಜ್ ಶೀರ್ ಪ್ರಾಂತ್ಯದ ಏಳು ಜಿಲ್ಲೆಗಳಲ್ಲಿ ನಾಲ್ಕು ಜಿಲ್ಲೆಗಳನ್ನು ನಿಯಂತ್ರಿಸುತ್ತಿವೆ ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ಹೇಳಿದ್ದಾರೆ.
700 ಉಗ್ರರ ಹತ್ಯೆ: ಆದರೆ ತಾಲಿಬಾನ್ ಹೇಳಿಕೆಯನ್ನು ಅಲ್ಲಗಳೆದಿರುವ ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆಯು ತಾವು ಖವಾಕ್ ಪಾಸ್ ನಲ್ಲಿ ಸಾವಿರಾರು ಭಯೋತ್ಪಾದಕರನ್ನು ಸುತ್ತುವರಿದಿದ್ದೇವೆ. ದಸ್ತೇ ರೇವಾಕ್ ಪ್ರದೇಶದಲ್ಲಿ ತಾಲಿಬಾನ್ ಪಡೆ ವಾಹನಗಳು ಮತ್ತು ಸಲಕರಣೆಗಳನ್ನು ಬಿಟ್ಟು ಹೋಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲದೆ 700 ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಕೊಲ್ಲಲಾಗಿದೆ. 600 ಉಗ್ರರನ್ನು ಸೆರೆಹಿಡಿದು ಸೆರೆಮನೆಗೆ ಹಾಕಲಾಗಿದೆ ಎಂದು ಪಂಜ್ ಶೀರ್ ನ ಹೋರಾಟ ಪಡೆ ಹೇಳಿಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ತಾಲಿಬಾನ್ ಪಡೆಗಳು ಸ್ಥಳದಿಂದ ಹೊರಹೋಗುವ ದೃಶ್ಯಗಳು ಕಂಡುಬಂದಿದೆ. ಇರಾನ್ ಪತ್ರಕರ್ತ ತಾಜುಡೆನ್ ಸೊರೌಶ್ ಹಂಚಿಕೊಂಡಿರುವ ಇಂತಹ ಒಂದು ವಿಡಿಯೋದಲ್ಲಿ, ತಾಲಿಬಾನ್ ಪಂಜ್ ಶೀರ್‌ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಜನರು ಹೇಳುತ್ತಿರುವುದನ್ನು ಕೇಳಬಹುದಾಗಿದೆ.