Advertisement

ತಾಲಿಬಾನ್ ಅಟ್ಟಹಾಸ: ಪಂಜ್ ಶೀರ್ ಸಿಂಹ “ಶಾ”ಸಮಾಧಿ ಧ್ವಂಸ, ನಾರ್ವೆ ರಾಯಭಾರ ಕಚೇರಿ ವಶಕ್ಕೆ

04:03 PM Sep 09, 2021 | Team Udayavani |

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭಗೊಂಡ ಬೆನ್ನಲ್ಲೇ ಅಟ್ಟಹಾಸವನ್ನು ಮುಂದುವರಿಸಿದ್ದು, ಗುರುವಾರ (ಸೆಪ್ಟೆಂಬರ್ 09) ಅಫ್ಘಾನಿಸ್ತಾನದ ದಂತಕಥೆ, ಬಂಡುಕೋರ ಕಮಾಂಡರ್ ಅಹ್ಮದ್ ಶಾ ಮಸೌದ್ ಅವರ ಸಮಾಧಿಯನ್ನು ತಾಲಿಬಾನ್ ಉಗ್ರರು ಧ್ವಂಸಗೊಳಿಸಿದ್ದಾರೆ. ಈ ಘಟನೆ ಬಳಿಕ ಅಫ್ಘಾನಿಸ್ತಾನದ ಜನರು ತಾಲಿಬಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅಹ್ಮದ್ ಶಾ ಮಸೌದ್ ಅವರನ್ನು ಪಂಜ್ ಶೀರ್ ನ ಸಿಂಹ ಎಂದೇ ಕರೆಯಲಾಗುತ್ತದೆ. ಅಫ್ಘಾನ್ ಮುಜಾಹಿದೀನ್ ನಾಯಕರಲ್ಲಿ ಪ್ರಮುಖರಾಗಿದ್ದ ಮಸೌದ್, 1989ರಲ್ಲಿ ಸೋವಿಯತ್ ಒಕ್ಕೂಟದ ಸೈನಿಕರನ್ನು ಪರಾಜಯಗೊಳಿಸಿದ್ದರು.

ಅಫ್ಘಾನಿಸ್ತಾನದಲ್ಲಿನ ದುರಾಡಳಿತದ ವಿರುದ್ಧ ಹೋರಾಟ ಆರಂಭಿಸಿದ್ದ ಶಾ ಮಸೌದ್ ಪಂಜ್ ಶೀರ್ ಸ್ವತಂತ್ರವಾಗಿರಬೇಕು ಎಂದು ಬಯಸಿ ತಮ್ಮದೇ ಸ್ವಂತ ಪಡೆಯನ್ನು ಕಟ್ಟಿಕೊಂಡು ಹೋರಾಟ ನಡೆಸಿದ್ದರು. ಅದರ ಪರಿಣಾಮ ಸುಮಾರು 40 ವರ್ಷಗಳ ಕಾಲ ಪಂಜ್ ಶೀರ್ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲವಾಗಿತ್ತು.

1996ರಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿಯೂ ಸುಮಾರು ಐದು ವರ್ಷಗಳ ಕಾಲ ಪಂಜ್ ಶೀರ್ ಪ್ರದೇಶ ತಾಲಿಬಾನ್ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲವಾಗಿತ್ತು.

2001ರ ಸೆಪ್ಟೆಂಬರ್ 11ರಂದು ಅಲ್ ಖೈದಾ ಉಗ್ರಗಾಮಿ ಸಂಘಟನೆ ಸಂಚು ರೂಪಿಸಿ, ಅರಬ್ ಪತ್ರಕರ್ತರಂತೆ ವೇಷಧರಿಸಿ ಸಂದರ್ಶನ ಮಾಡುವ ನೆಪದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ ಅಹ್ಮದ್ ಶಾ ಮಸೌದ್ ಅವರನ್ನು ಹತ್ಯೆಗೈಯಲಾಗಿತ್ತು. ಇದೀಗ ಪಂಜ್ ಶೀರ್ ನಲ್ಲಿ ಶಾ ಪುತ್ರ ಅಹ್ಮದ್ ಮಸೌದ್ ಹಾಗೂ ಅಫ್ಘಾನ್ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ನೇತೃತ್ವದಲ್ಲಿ ತಾಲಿಬಾನ್ ಆಡಳಿತದ ವಿರುದ್ಧ ಹೋರಾಟ ಮುಂದುವರಿದಿದೆ.

Advertisement

ನಾರ್ವೆ ರಾಯಭಾರ ಕಚೇರಿಯಲ್ಲಿ ತಾಲಿಬಾನ್ ಅಟ್ಟಹಾಸ:

ಕಾಬೂಲ್ ನಲ್ಲಿರುವ ನಾರ್ವೆ ರಾಯಭಾರ ಕಚೇರಿಯನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡ ಬಳಿಕ, ಅಲ್ಲಿರುವ ವೈನ್ ಬಾಟಲಿಗಳನ್ನು ಒಡೆದು ಹಾಕಿ, ಪುಸ್ತಕಗಳನ್ನು ನಾಶಪಡಿಸಿರುವುದಾಗಿ ವರದಿ ಹೇಳಿದೆ.

ವಿದೇಶಗಳ ರಾಜತಾಂತ್ರಿಕ ಕಚೇರಿ ಹಾಗೂ ರಾಯಭಾರ ಕಚೇರಿಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಾಲಿಬಾನ್ ಈ ಮೊದಲು ಹೇಳಿಕೆ ನೀಡಿತ್ತು. ಅಫ್ಘಾನಿಸ್ತಾನದಲ್ಲಿನ ಭದ್ರತಾ ಸ್ಥಿತಿ ಮತ್ತು ಮುಂಜಾಗ್ರತಾ ಕ್ರಮವಾಗಿ ಕಳೆದ ತಿಂಗಳು ತಮ್ಮ ಸಿಬಂದಿಗಳನ್ನು ಸುರಕ್ಷಿತವಾಗಿ ವಾಪಸ್ ಸ್ವದೇಶಕ್ಕೆ ಕರೆಯಿಸಿ ಕೊಂಡ ಬಳಿಕ, ಡೆನ್ಮಾರ್ಕ್ ಮತ್ತು ನಾರ್ವೆ ಕಾಬೂಲ್ ನಲ್ಲಿರುವ ತಮ್ಮ ರಾಯಭಾರ ಕಚೇರಿಯನ್ನು ಬಂದ್ ಮಾಡುವುದಾಗಿ ಘೋಷಿಸಿದ್ದವು.

ಏತನ್ಮಧ್ಯೆ ಅಫ್ಘಾನಿಸ್ತಾನದಲ್ಲಿರುವ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ನಾರ್ವೆ ತಿಳಿಸಿದೆ. ಮತ್ತೊಂದೆಡೆ ಅಮೆರಿಕದ ಸೇನಾ ಪಡೆಗಳು ಅಫ್ಘಾನಿಸ್ತಾನವನ್ನು ತೊರೆದು ಹೋದ ನಂತರ 200 ಅಮೆರಿಕ ಪ್ರಜೆಗಳು ಮತ್ತು ಇತರ ವಿದೇಶಿ ನಾಗರಿಕರಿಗೆ ಅಫ್ಘಾನಿಸ್ತಾನದಿಂದ ತೆರಳಲು ತಾಲಿಬಾನ್ ಅವಕಾಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next