ನವದೆಹಲಿ:ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಬುಧವಾರ (ಆಗಸ್ಟ್ 18) ತಾಲಿಬಾನ್ ಪಡೆ ಅಫ್ಘಾನ್ ನಲ್ಲಿರುವ ಭಾರತದ ಎರಡು ದೂತವಾಸ ಕಚೇರಿಗೆ ನುಗ್ಗಿ ದಾಖಲೆಗಳ ಹುಡುಕಾಟ ನಡೆಸಿ, ಕಾರುಗಳನ್ನು ಬಲವಂತವಾಗಿ ಕೊಂಡೊಯ್ದ ಘಟನೆ ನಡೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಂದಹಾರ್ ಮತ್ತು ಹೇರತ್ ನಲ್ಲಿರುವ ಭಾರತೀಯ ಕಾನ್ಸುಲೇಟ್ ಗೆ ನುಗ್ಗಿ ತಾಲಿಬಾನ್ ಉಗ್ರರು ಶೋಧ ಕಾರ್ಯ ನಡೆಸಿದ್ದು, ಕಾನ್ಸುಲೇಟ್ ನಲ್ಲಿರುವ ಕಾರುಗಳನ್ನು ಕೊಂಡೊಯ್ದಿರುವುದಾಗಿ ವರದಿ ವಿವರಿಸಿದೆ.
ತಾಲಿಬಾನ್ ಉಗ್ರರು ಮಹತ್ವದ ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಕಾಬೂಲ್ ರಾಯಭಾರ ಕಚೇರಿಯಲ್ಲಿರುವ ಅಧಿಕಾರಿಗಳನ್ನು ಭಾರತ ಸ್ಥಳಾಂತರಿಸುವ ಅಗತ್ಯವಿಲ್ಲ ಎಂಬ ಸಂದೇಶವನ್ನು ತಾಲಿಬಾನ್ ಬಂಡುಕೋರರು ಭಾರತಕ್ಕೆ ಕಳುಹಿಸಿದ್ದಾರೆನ್ನಲಾಗಿದೆ. ಅಲ್ಲದೇ ಭಾರತದ ಅಧಿಕಾರಿಗಳು ಮತ್ತು ಭದ್ರತಾ ಸಿಬಂದಿಗಳಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿತ್ತು ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಶೋಧ ಕಾರ್ಯ ನಡೆಸಿಲ್ಲ:
ಕಂದಹಾರ್ ಮತ್ತು ಹೇರಾತ್ ನಲ್ಲಿರುವ ಭಾರತದ ಕಾನ್ಸುಲೇಟ್ ಗಳಿಗೆ ತಾಲಿಬಾನ್ ಉಗ್ರರು ನುಗ್ಗಿ ದಾಖಲೆಗಾಗಿ ಶೋಧ ಕಾರ್ಯ ನಡೆಸಿದ್ದರು ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿರುವುದಾಗಿ ಮತ್ತೊಂದು ವರದಿ ತಿಳಿಸಿದೆ. ಅಂತಹ ಘಟನೆ ನಡೆದಿಲ್ಲ ಎಂದು ಕಾಬೂಲ್ ರಾಯಭಾರ ಕಚೇರಿಯಲ್ಲಿರುವ ಭಾರತದ ಸ್ಥಳೀಯ ಸಿಬಂದಿಗಳು ತಿಳಿಸಿರುವುದಾಗಿ ಮೂಲಗಳು ವಿವರಿಸಿದೆ.