ಕಾಬೂಲ್: ಕೆಲವು ದಿನಗಳ ಹಿಂದೆ ರಾಜಧಾನಿ ಕಾಬೂಲ್ ನಲ್ಲಿ ಭಯೋತ್ಪಾದನಾ ನಿಗ್ರಹ ದಾಳಿಯ ಸಂದರ್ಭದಲ್ಲಿ ತನ್ನ ಭದ್ರತಾ ಪಡೆಗಳು ಇಬ್ಬರು ಪ್ರಮುಖ ಇಸ್ಲಾಮಿಕ್ ಸ್ಟೇಟ್ ಕಮಾಂಡರ್ ಗಳನ್ನು ಹತ್ಯೆ ಮಾಡಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಹೇಳಿದೆ.
ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬನಾದ ಖಾರಿ ಫತೇಹ್, ಗುಪ್ತಚರ ಮುಖ್ಯಸ್ಥ ಮತ್ತು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಮಾಜಿ ಯುದ್ಧ ಮಂತ್ರಿ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಐಎಸ್‌ಕೆಪಿ ಸಂಘಟನೆಯು ಇಸ್ಲಾಮಿಕ್ ಸ್ಟೇಟ್‌ನ ಅಫ್ಘಾನ್ ಅಂಗಸಂಸ್ಥೆ ಮತ್ತು ಪ್ರಮುಖ ತಾಲಿಬಾನ್ ವಿರೋಧಿಯಾಗಿದೆ.
ಖಾರಿ ಫತೇಹ್ ಕಾಬೂಲ್ ನಲ್ಲಿ ರಷ್ಯಾ, ಪಾಕಿಸ್ತಾನಿ ಮತ್ತು ಚೀನೀ ರಾಜತಾಂತ್ರಿಕ ಕಾರ್ಯಾಚರಣೆಗಳು ಸೇರಿದಂತೆ ಹಲವಾರು ದಾಳಿಗಳನ್ನು ಯೋಜಿಸುವ ಜವಾಬ್ದಾರಿಯನ್ನು ಹೊತ್ತಿದ್ದ.
ಇಸ್ಲಾಮಿಕ್ ಸ್ಟೇಟ್ ಹಿಂದ್ ಪ್ರಾಂತ್ಯದ (ಐಎಸ್‌ಎಚ್ ಪಿ) ಮೊದಲ ಎಮಿರ್ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಐಎಸ್‌ಕೆಪಿ ಯ ಹಿರಿಯ ನಾಯಕ ಎಜಾಜ್ ಅಹ್ಮದ್ ಅಹಂಗರ್ ಅವರ ಹತ್ಯೆಯನ್ನೂ ಮಾಡಲಾಗಿದೆ ಎಂದು ಮುಜಾಹಿದ್ ದೃಢಪಡಿಸಿದರು.
ಅಬು ಉಸ್ಮಾನ್ ಅಲ್-ಕಾಶ್ಮೀರಿ ಎಂದೂ ಕರೆಯಲ್ಪಡುವ ಅಹಂಗರ್‌ನನ್ನು ಈ ವರ್ಷದ ಜನವರಿಯಲ್ಲಿ ಭಾರತ ಸರ್ಕಾರವು ಭಯೋತ್ಪಾದಕ ಎಂದು ಹೆಸರಿಸಿದೆ. ಶ್ರೀನಗರದಲ್ಲಿ ಜನಿಸಿದ ಈತ ಎರಡು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.