ಮಾಸ್ಕೋ: ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡ ಬಳಿಕ ಇದೀಗ ಅಫ್ಘಾನಿಸ್ತಾನದ ಶೇ.85ರಷ್ಟು ಪ್ರದೇಶ ತಮ್ಮ ನಿಯಂತ್ರಣದಲ್ಲಿದೆ ಎಂದು ತಾಲಿಬಾನ್ ಶುಕ್ರವಾರ(ಜುಲೈ 09) ತಿಳಿಸಿದೆ.
ಇದನ್ನೂ ಓದಿ:ಬಾಂಗ್ಲಾದೇಶ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ; 52 ಮಂದಿ ಸಜೀವ ದಹನ
ಮಾಸ್ಕೋದಲ್ಲಿ ತಾಲಿಬಾನ್ ನಿಯೋಗ, ಅಫ್ಘಾನಿಸ್ತಾನದ 398 ಜಿಲ್ಲೆಗಳ ಪೈಕಿ ಸುಮಾರು 250 ಜಿಲ್ಲೆಗಳು ತಮ್ಮ ನಿಯಂತ್ರಣದಲ್ಲಿರುವುದಾಗಿ ಹೇಳಿಕೊಂಡಿದೆ. ಆದರೆ ಈ ಹೇಳಿಕೆಯನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಅಸಾಧ್ಯದ ಕೆಲಸ ಎಂದು ವರದಿ ವಿಶ್ಲೇಷಿಸಿದೆ.
ಮತ್ತೊಂದೆಡೆ ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಎಎಫ್ ಪಿ ಜತೆ ಮಾತನಾಡುತ್ತ, ಇಸ್ಲಾಂ ಖ್ವಾಲಾ ಗಡಿ ನಿಯಂತ್ರಣ ಪ್ರದೇಶ ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿರುವುದಾಗಿ ತಿಳಿಸಿದ್ದರೆ, ಕಾಬೂಲ್ ಸರ್ಕಾರಿ ಅಧಿಕಾರಿಗಳು, ತಾಲಿಬಾನ್ ಉಗ್ರರ ವಿರುದ್ಧದ ಹೋರಾಟ ಮುಂದುವರಿದಿದೆ ಎಂದು ತಿಳಿಸಿದೆ.
ಗಡಿ ಭದ್ರತಾ ಪಡೆ ಸೇರಿದಂತೆ ಎಲ್ಲಾ ಅಫ್ಘಾನ್ ಸೇನಾ ಪಡೆ ಈ ಪ್ರದೇಶದಲ್ಲಿ ಕಾರ್ಯೋನುಖವಾಗಿದ್ದು, ಆಕ್ರಮಿತ ಪ್ರದೇಶವನ್ನು ಮರು ವಶಕ್ಕೆ ಪಡೆಯಲು ಪ್ರಯತ್ನ ಮುಂದುವರಿದಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಖ್ ಅರಿಯನ್ ಎಎಫ್ ಪಿಗೆ ತಿಳಿಸಿರುವುದಾಗಿ ವರದಿ ಮಾಡಿದೆ.