ಕಾಬೂಲ್: ವಿಶ್ವದ ಶ್ರೀಮಂತ ಟಿ20 ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಆರಂಭವಾಗಿದೆ. ಭಾರತದಲ್ಲಿ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ 14ನೇ ಆವೃತ್ತಿಯು ದುಬೈನಲ್ಲಿ ರವಿವಾರ ಪುನರಾರಂಭವಾಗಿದೆ. ರವಿವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆದಿದೆ.
ಐಪಿಎಲ್ ಕೂಟ ಭಾರತದಲ್ಲಿ ಮಾತ್ರವಲ್ಲದೆ ಹಲವಾರು ದೇಶಗಳಲ್ಲಿ ಪ್ರಸಾರವಾಗುತ್ತದೆ. ಆದರೆ ಅಫ್ಘಾನಿಸ್ಥಾನಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಲಾಗಿದೆ. ಐಪಿಎಲ್ ನಲ್ಲಿ ಮುಸ್ಲಿಂ ತತ್ವಕ್ಕೆ ವಿರುದ್ದವಾದ ವಿಚಾರಗಳಿವೆ ಎನ್ನುವುದು ಅಫ್ಘಾನಿಸ್ಥಾನದ ತಾಲಿಬಾನ್ ಸರ್ಕಾರದ ವಾದ.
ಅಫ್ಘಾನಿಸ್ಥಾನವು ತಾಲಿಬಾನ್ ನಿಯಂತ್ರಣಕ್ಕೆ ಬಂದ ಬಳಿಕ ಕ್ರೀಡೆ, ಸಿನಿಮಾ ಸೇರಿದಂತೆ ಹಲವಾರು ಮನರಂಜನೆ ಮೂಲಗಳನ್ನು ನಿಷೇಧಿಸಲಾಗಿದೆ. ಅದರಲ್ಲೂ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದನ್ನು ತಾಲಿಬಾನ್ ವಿರೋಧಿಸಿದೆ.
ಐಪಿಎಲ್ ನಲ್ಲಿ ಹುಡುಗಿಯರು ನೃತ್ಯ ಮಾಡುತ್ತಾರೆ, ಇದು ಇಸ್ಲಾಂ ತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಅಫ್ಘಾನ್ ನಲ್ಲಿ ಐಪಿಎಲ್ ಪ್ರಸಾರಕ್ಕೆ ತಾಲಿಬಾನ್ ನಿಷೇಧ ಹೇರಿದೆ ಎಂದು ಅಫ್ಘಾನ್ ಕ್ರಿಕೆಟ್ ಮಂಡಳಿಯ ಮಾಜಿ ಮೀಡಿಯಾ ಮ್ಯಾನೇಜರ್ ಮತ್ತು ಪತ್ರಕರ್ತ ಇಬ್ರಾಹಿಂ ಮೊಮಾಂಡ್ ಹೇಳಿದ್ದಾರೆ.
ಇದನ್ನೂ ಓದಿ:ಬೇರೆ ತಂಡದಲ್ಲಿ ಆಡುವುದನ್ನು ಯೋಚಿಸಲೂ ಸಾಧ್ಯವಿಲ್ಲ: ವಿರಾಟ್ ಕೊಹ್ಲಿ
ಅಫ್ಘಾನಿಸ್ಥಾನದಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸುವ ಕಾರಣಕ್ಕೆ ಹಲವಾರು ಟೀಕೆಗಳು ಕೇಳಿಬಂದಿದೆ. ಅಫ್ಘಾನ್ ಕ್ರಿಕೆಟ್ ತಂಡದ ಮಾನ್ಯತೆ ರದ್ದು ಮಾಡಬೇಕೆಂದು ಆಸ್ಟ್ರೇಲಿಯನ್ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು.