ದುಬೈ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಕ್ರಿಕೆಟ್ ಸಂಪೂರ್ಣ ಅತಂತ್ರಗೊಂಡಿತ್ತು. ಪುರುಷರ ಕ್ರಿಕೆಟ್ ಅಲ್ಪಸ್ವಲ್ಪ ಜೀವ ಹಿಡಿದುಕೊಂಡಿದ್ದರೂ, ಮಹಿಳಾ ಕ್ರಿಕೆಟ್ ಮುಗಿಯಿತೆಂದೇ ಎಲ್ಲರೂ ಭಾವಿಸಿದ್ದರು. ಈಗ ಮಹಿಳಾ ಆಟಗಾರ್ತಿಯರಿಗೆ ಒಂದು ಸಂತೋಷದ ಸುದ್ದಿ ಲಭಿಸಿದೆ.
ಅಲ್ಲಿನ ತಾಲಿಬಾನ್ ಆಡಳಿತ ಮಹಿಳಾ ಕ್ರಿಕೆಟ್‌ಗೆ ಪೂರ್ಣ ಅನುಮತಿ ನೀಡಿದೆ. ಈ ಕುರಿತು ಐಸಿಸಿಯ ಸಂವಿಧಾನವನ್ನು ಗೌರವಿಸಿರುವ ಅದು, ಮಹಿಳಾ ಕ್ರಿಕೆಟ್ ಮುಂದುವರಿಕೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದೆ.
ಮಹಿಳೆಯರು ಮನೆಬಿಟ್ಟು ಹೊರಬಂದು ಕೆಲಸ ಮಾಡುವುದು ಇಸ್ಲಾಮ್‌ನ ಕಟ್ಟಾ ಅನುಯಾಯಿಗಳಾಗಿರುವ ತಾಲಿಬಾನಿಗಳಿಗೆ ಸಮ್ಮತವಿರಲಿಲ್ಲ. ಆದ್ದರಿಂದ ಮಹಿಳೆಯರು ಕ್ರೀಡಾಕ್ಷೇತ್ರಕ್ಕೆ ಪ್ರವೇಶಿಸುವುದಕ್ಕೆ ಕೂಡಲೇ ತಡೆಯೊಡ್ಡಿದ್ದರು. ಈ ಕುರಿತು ಐಸಿಸಿ ಒಂದು ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು.
ಇದನ್ನೂ ಓದಿ:ಉದಯಪುರ ರೈಲ್ವೆ ಹಳಿ ಸ್ಫೋಟ: ಭಯೋತ್ಪಾದಕ ಕೃತ್ಯ ಎಂದ ರಾಜಸ್ಥಾನ ಪೊಲೀಸರು, ತನಿಖೆ ಚುರುಕು
ಇದೀಗ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ, ತಾಲಿಬಾನ್ ಸರ್ಕಾರ, ಐಸಿಸಿ ಸಮಿತಿ ನಡುವೆ ಮಾತುಕತೆ ನಡೆದಿದೆ. ಈ ಮಾತುಕತೆಯಲ್ಲಿ ಮಹಿಳಾ ಕ್ರಿಕೆಟ್‌ಗೆ ಅನುಮತಿ ನೀಡಲಾಗಿದೆ. ತಾಲಿಬಾನ್ ಆಡಳಿತ ದೇಶದಲ್ಲಿ ವೈವಿಧ್ಯತೆ, ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆಯನ್ನು ತರಲು ಸಿದ್ಧವಾಗಿದೆ. ಇದನ್ನು ನಂಬಿರುವ ಐಸಿಸಿ ಪರಿಸ್ಥಿತಿಯನ್ನು ಸನಿಹದಿಂದ ಅವಲೋಕನ ಮಾಡಲಿದೆ.