Advertisement

ತಾಲಿಬಾನ್‌-ಅಫ್ಘಾನ್‌ ಸರಕಾರದ ಮಾತುಕತೆ ಅಪಾಯದ ನೆರಳಲ್ಲಿ

12:51 AM Sep 15, 2020 | Hari Prasad |

ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಗಾಗಿ ಅಫ್ಘಾನ್‌ ಸರಕಾರ ಹಾಗೂ ತಾಲಿಬಾನ್‌ ನಡುವೆ ಕತಾರ್‌ನಲ್ಲಿ ಮಾತುಕತೆ ಆರಂಭವಾಗಿದೆ.

Advertisement

ಆದರೆ ಈ ಮಾತುಕತೆಯಿಂದ ನಿಜಕ್ಕೂ ಪರಿಣಾಮಕಾರಿ ಫ‌ಲಿತಾಂಶಗಳು ಹೊರಬರುತ್ತವೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಗಾಗಿ ಇದುವರೆಗೂ ಅನೇಕ ಬಾರಿ ಸಭೆಗಳನ್ನು ನಡೆಸಲಾಗಿದೆ.

ಕೆಲವು ತಿಂಗಳ ಹಿಂದೆ ಅಮೆರಿಕ ಹಾಗೂ ತಾಲಿಬಾನ್‌ ನಡುವೆಯೂ ಇಂಥದ್ದೊಂದು ಸಭೆ ನಡೆದು, ವಿಫ‌ಲವಾಗಿತ್ತು.

ಈ ಶಾಂತಿ ಒಪ್ಪಂದ ಚರ್ಚೆಗಾಗಿ ಅಫ್ಘಾನಿಸ್ಥಾನ ಸರಕಾರ ಹಾಗೂ ತಾಲಿಬಾನ್‌ನ ಪ್ರತಿನಿಧಿಗಳಷ್ಟೇ ಅಲ್ಲದೇ, ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪಾಂಪಿಯೋ ಕೂಡ ಕತಾರ್‌ಗೆ ಬಂದಿದ್ದಾರೆ. ಆದರೆ ಖುದ್ದು ಪಾಂಪಿಯೋ ಅವರಿಗೂ ಈ ವಿಷಯದಲ್ಲಿ ಅಷ್ಟು ಭರವಸೆ ಇಲ್ಲ ಎನ್ನುವುದು ಅವರ ನುಡಿಗಳಿಂದಲೇ ಸ್ಪಷ್ಟವಾಗುತ್ತಿದೆ. ಈ ಶಾಂತಿ ಮಾತುಕತೆಯು ಅಮೆರಿಕದ ಮಧ್ಯಸ್ಥಿಕೆ ಹಾಗೂ ಒತ್ತಡದ ನಡುವೆ ನಡೆಯುತ್ತಿದೆ ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ.

Advertisement

ಅಫ್ಘಾನಿಸ್ಥಾನದಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಯೋಚನೆಯಲ್ಲಿರುವ ಅಮೆರಿಕ, ತಾಲಿಬಾನ್‌ ಹಾಗೂ ಅಫ್ಘಾನ್‌ ಸರಕಾರದ ನಡುವೆ ಒಪ್ಪಂದ ಮಾಡಿಸಿ ಹೊರಹೋಗಲು ಬಯಸುತ್ತದೆ. ಆದರೆ ತಾನು ಅಫ್ಘಾನಿಸ್ಥಾನದಿಂದ ಅಡಿ ಹೊರಗೆ ಇಟ್ಟದ್ದೇ ಆದಲ್ಲಿ ತಾಲಿಬಾನ್‌ ತನ್ನ ದುಷ್ಟ ಬುದ್ಧಿಯನ್ನು ಅನಾವರಣಗೊಳಿಸಲಿದೆ ಎನ್ನುವುದು ಅಮೆರಿಕಕ್ಕೆ ತಿಳಿದಿದೆ.

ತಾಲಿಬಾನ್‌ ಬಲಿಷ್ಠವಾದರೆ, ಮುಂದೆ ತನಗೂ ಅಪಾಯವಿದೆ ಎಂಬ ಆತಂಕವೂ ಅಮೆರಿಕಕ್ಕೆ ಇದೆ. ಅತ್ತ ಪಾಕಿಸ್ಥಾನ ಬಹಿರಂಗವಾಗಿಯೇ ತಾಲಿಬಾನ್‌ ಅನ್ನು ಬೆಂಬಲಿಸುತ್ತದೆ. ಹೀಗಾಗಿ ತಾಲಿಬಾನ್‌ ಬೆಳೆದುಬಿಟ್ಟರೆ ಪಾಕಿಸ್ಥಾನವು ಅಫ್ಘಾನ್‌ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಈ ಕಾರಣಕ್ಕಾಗಿಯೇ, ಭಾರತದ ವಿದೇಶಾಂಗ ಸಚಿವ ಡಾ| ಎಸ್‌. ಜಯಶಂಕರ್‌ ಅವರು ಅಫ್ಘಾನಿಸ್ಥಾನದ ನೆಲ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗಬಾರದು ಎಂದು ಈ ಸಭೆಯ ಹಿನ್ನೆಲೆಯಲ್ಲಿ ಶನಿವಾರ ವರ್ಚುವಲ್‌ ಭಾಷಣದಲ್ಲಿ ಹೇಳಿದ್ದಾರೆ.

ನಾಲ್ಕು ದಶಕಗಳಿಂದ ಸಂಘರ್ಷದಲ್ಲೇ ಮುಳುಗಿದ್ದ ಅಫ್ಘಾನಿಸ್ಥಾನದಲ್ಲಿ ಈಗಲೂ ನಿತ್ಯ ರಕ್ತಪಾತ ನಡೆಯುತ್ತಲೇ ಇರುತ್ತದಾದರೂ ತಾಲಿಬಾನ್‌ ಉತ್ತುಂಗದಲ್ಲಿದ್ದ ಸಮಯದಲ್ಲಿದ್ದಂಥ ಕ್ರೌರ್ಯ ಈಗ ತಗ್ಗಿದೆ. ಶರಿಯಾ ಕಾನೂನಿನ ಹೆಸರಿನಲ್ಲಿ ಮಹಿಳೆಯರು ಹಾಗೂ ಅಮಾಯಕ ಜನರ ಮಾರಣ ಹೋಮ ನಡೆಸಿತ್ತು ತಾಲಿಬಾನ್‌.

ಹೀಗಾಗಿ ಶಾಂತಿ ಮಾತುಕತೆಯ ವೇಳೆ ಹೊಂದಿಕೊಂಡು ಹೋಗುತ್ತೇವೆ ಎಂಬ ಧಾಟಿಯಲ್ಲಿ ಸೋಗು ಹಾಕಿ, ಅನಂತರ ತಾಲಿಬಾನ್‌ ತನ್ನ ದುರ್ಗುಣವನ್ನು ಅನಾವರಣಗೊಳಿಸಬಹುದು ಎಂಬ ಭಯ ಅಫ್ಘಾನ್‌ ಸರಕಾರಕ್ಕೆ ಹಾಗೂ ಅಲ್ಲಿನ ಜನರಿಗಿದೆ. ಅಮೆರಿಕದಲ್ಲಿ ಇನ್ನೆರಡು ತಿಂಗಳ ಅನಂತರ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ಟ್ರಂಪ್‌ ಅವರು ಅಫ್ಘಾನಿಸ್ಥಾನದಿಂದ ಅಮೆರಿಕ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಭರವಸೆ ನೀಡಿದ್ದರು. ಈ ಕಾರಣಕ್ಕಾಗಿಯೇ, ಈ ಬಾರಿಯ ಚುನಾವಣೆಗೂ ಮುನ್ನ ಈ ವಿಷಯದಲ್ಲಿ ಜನರ ಮನ ಗೆಲ್ಲಬೇಕು ಎನ್ನುವ ಇರಾದೆ ಅವರಿಗಿದೆ. ಆದರೆ ಹಾಗೇನಾದರೂ ಆಗಿಬಿಟ್ಟರೆ, ಅಫ್ಘಾನಿಸ್ಥಾನಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಮಧ್ಯ ಪ್ರಾಚ್ಯದಲ್ಲಿ ನೆಲೆ ಕಳೆದುಕೊಂಡಿರುವ ಐಸಿಸ್‌ ಈಗ ಅಫ್ಘಾನಿಸ್ಥಾನದಲ್ಲಿ ನಿಧಾನಕ್ಕೆ ಹೆಡೆಯೆತ್ತುತ್ತಿದೆ. ಅಮೆರಿಕ ತನ್ನ ಸೈನ್ಯವನ್ನೇನಾದರೂ ಹಿಂದಕ್ಕೆ ಕರೆಸಿಕೊಂಡಿತೆಂದರೆ, ಆಗಬಹುದಾದ ಅನಾಹುತವನ್ನು ಊಹಿಸುವುದಕ್ಕೂ ಕಷ್ಟವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next