ಬೆಂಗಳೂರು: ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ- ಹುಬ್ಬಳ್ಳಿ ನಡುವಿನ 158 ಕಿ.ಮೀ. ಉದ್ದದ ರೈಲು ಮಾರ್ಗ ಯೋಜನೆಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪೀಕರ್, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಉದ್ದೇಶಿತ ತಾಳಗುಪ್ಪ-ಹುಬ್ಬಳ್ಳಿ ಮಾರ್ಗದಿಂದ ಮಲೆನಾಡು, ಅರೆಮಲೆನಾಡು, ಬಯಲು ಸೀಮೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗದ 15 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಆದುದರಿಂದ ಈ ಯೋಜನೆಗೆ ಸರ್ಕಾರವು ಅಗತ್ಯ ಆಡಳಿತಾತ್ಮಕ ಅನುಮೋದನೆ ಯೊಂದಿಗೆ ಪೂರಕ ಅನುದಾನವನ್ನು 2023-24ರ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಕಾಗೇರಿ ಕೋರಿದ್ದಾರೆ.
ಈಗಾಗಲೇ ಈ ಯೋಜನೆಯ ಪ್ರಾಥಮಿಕ ಕಾರ್ಯಗಳು ಆರಂಭಗೊಂಡಿವೆ. ಕಾಮಗಾರಿಯ ಸರ್ವೇ ಪೂರ್ಣಗೊಂಡಿದೆ.
ಯೋಜನೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತಂದರೆ ರಾಜ್ಯದ ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಕೃಷಿ ಮತ್ತು ಉತ್ಪನ್ನ, ಶೈಕ್ಷಣಿಕ ಮತ್ತು ಶಿಕ್ಷಣಾರ್ಥಿ ವೃಂದ, ಧಾರ್ಮಿಕ, ಸಾಗಾಣಿಕೆ, ವ್ಯಾಪಾರ ವಹಿವಾಟು ಮುಂತಾದ ಕ್ಷೇತ್ರಗಳಿಗೆ ಅನುಕೂಲವಾಗಲಿದೆ.
ಪರಿಸರ ಮಾಲಿನ್ಯ ಕಡಿಮೆ ಆಗಲಿದೆ ಎಂದು ಯೋಜನೆಯ ಮಹತ್ವವನ್ನು ಕಾಗೇರಿ ತಮ್ಮ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.