ಇತ್ತೀಚಿನ ದಿನಗಳಲ್ಲಿ ಪಂಜಾಬ್‌ನಲ್ಲಿ ಖಲಿಸ್ಥಾನಿ ಬೆಂಬಲಿಗರ ಅಟಾಟೋಪಗಳು ಹೆಚ್ಚಾಗಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆ ಮೇಲೆ ಅಪಾರ ಪ್ರಮಾಣದ ಪರಿಣಾಮ ಬೀರುತ್ತಿದೆ. ಅದರಲ್ಲಿಯೂ ಖಲಿಸ್ಥಾನಿ ಬೆಂಬಲಿಗ ಅಮೃತ್‌ಪಾಲ್ ಸಿಂಗ್ ಪಂಜಾಬ್‌ಗ ಪ್ರವೇಶ ಮಾಡಿದ ಬಳಿಕ ಪಂಜಾಬ್‌ನಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿರುವುದು ಕಂಡು ಬರುತ್ತಿದೆ.
ಅಮೃತ್‌ಪಾಲ್ ಸಿಂಗ್‌ನ ಬೆಂಬಲಿಗನೊಬ್ಬನನ್ನು ಪೊಲೀಸರು ಬಂಧಿಸಿದ್ದ ವೇಳೆ ರಾಜ್ಯದಲ್ಲಿ ದೊಡ್ಡ ಮಟ್ಟದ ಹಿಂಸಾಚಾರವೂ ನಡೆದಿತ್ತು. ನೇರವಾಗಿ ಆಯುಧಗಳೊಂದಿಗೆ ಬಂದಿದ್ದ ಅಮೃತ್ ಪಾಲ್ ಬೆಂಬಲಿಗರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿದಿದ್ದರು. ಕಡೆಗೆ ಈತನ ಪ್ರತಿಭಟನೆಯಿಂದಾಗಿ ಸಹಚರನನ್ನು ಬಿಟ್ಟು ಕಳುಹಿಸಲಾಗಿತ್ತು. ಇದೊಂದು ರೀತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪಂಜಾಬ್ ಸರಕಾರದ ವಿರುದ್ಧ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಘಟನೆಯಾದ ಬಳಿಕ ಒಂದು ರೀತಿಯಲ್ಲಿ ಅಮೃತ್ ಸಿಂಗ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಅಲ್ಲದೆ ಅಮೃತ್ ಪಾಲ್ ಸಿಂಗ್ ರಾಜ್ಯ ಸರಕಾರ ಮತ್ತು ಪೊಲೀಸರಿಗೇ ಸಡ್ಡು ಹೊಡೆಯುವಷ್ಟರ ಮಟ್ಟಿಗೆ ಬೆಳೆದಿದ್ದ ಎಂಬುದೂ ಗೊತ್ತಾಗಿತ್ತು. ಹೀಗಾಗಿ ಈತನ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಈ ಕಾರಣಕ್ಕಾಗಿಯೇ ಮೂರು ದಿನಗಳ ಹಿಂದೆ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು.
ಈಗಾಗಲೇ ಅಮೃತ್ ಪಾಲ್ ಸಿಂಗ್ ಮತ್ತು ಪೊಲೀಸರ ನಡುವಿನ ಈ ಕಣ್ಣಾಮುಚ್ಚಾಲೆ ಆಟ ಶುರುವಾಗಿ ಮೂರು ದಿನಗಳಾಗಿವೆ. ಇಡೀ ಪಂಜಾಬ್‌ನಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಆದರೂ ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡುತ್ತಿದ್ದಾನೆ ಅಮೃತ್ ಪಾಲ್ ಸಿಂಗ್. ವಿಚಿತ್ರವೆಂದರೆ ಸೋಮವಾರ ಸಂಜೆ ವೇಳೆಗೂ ಆತ ಇನ್ನೂ ಸಿಕ್ಕಿಲ್ಲ. ಅಲ್ಲದೆ ಅಮೃತ್ ಪಾಲ್ ಸಿಂಗ್ ವಿದೇಶಕ್ಕೆ ಓಡಿ ಹೋಗಿರಬಹುದೇ? ಬಂಧಿಸಿದ್ದರೂ ಪೊಲೀಸರೇ ಹೇಳುತ್ತಿಲ್ಲವೇ ಎಂಬ ಪ್ರಶ್ನೆಗಳೂ ಜನರ ಕಡೆಯಿಂದ ಕೇಳಿಬರುತ್ತಿವೆ.
ಈ ಬೆಳವಣಿಗೆಗಳಾದ ಮೇಲೆ ಕೇಂದ್ರ ಸರಕಾರವೂ ಮಧ್ಯ ಪ್ರವೇಶಿಸಿ, ರಾಷ್ಟ್ರೀಯ ಭದ್ರತ ಕಾಯ್ದೆ (ಎನ್‌ಎಸ್‌ಎ)ಯಂತೆ ಪ್ರಕರಣ ದಾಖಲಿಸಿದೆ. ಈಗಾಗಲೇ ಈತನ ಐವರು ಸಹಚರರನ್ನು ಹಿಡಿದು ಜೈಲಿಗೆ ಹಾಕಲಾಗಿದೆ. ಅವರ ವಿರುದ್ಧವೂ ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಡವಾಗಿಯಾದರೂ ಸರಕಾರಗಳು ಒಂದಷ್ಟು ಕಠಿನ ಕ್ರಮಕ್ಕೆ ಮುಂದಾಗಿರುವುದು ಉತ್ತಮ.
ಅತ್ತ ವಿದೇಶಗಳಲ್ಲಿಯೂ ಖಲಿಸ್ಥಾನಿ ಬೆಂಬಲಿಗರ ದಾಂಧಲೆ ಜೋರಾಗಿದೆ. ರವಿವಾರ ರಾತ್ರಿ ಲಂಡನ್‌ನಲ್ಲಿನ ಭಾರತ ಹೈಕಮಿಷನ್ ಕಚೇರಿ ಮೇಲಿನ ಭಾರತದ ಧ್ವಜವನ್ನು ತೆರವುಗೊಳಿಸಲು ಖಲಿಸ್ಥಾನಿ ಬೆಂಬಲಿಗರು ಮುಂದಾಗಿದ್ದರು. ಆಗ ಅಲ್ಲಿನ ಅಧಿಕಾರಿಗಳ ಸಮಯ ಪ್ರಜ್ಞೆ ಮತ್ತು ಸಾಹಸದಿಂದ ಅವಮಾನವಾಗುವುದು ತಪ್ಪಿದಂತಾಗಿದೆ. ಇದರ ನಡುವೆಯೇ ಸೋಮವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿ ಖಲಿಸ್ಥಾನಿ ಪುಂಡರು ದಾಂಧಲೆ ಎಬ್ಬಿಸಿದ್ದಾರೆ. ಹೀಗಾಗಿ ಸದ್ಯ ಬ್ರಿಟನ್, ಅಮೆರಿಕ, ಕೆನಡಾ, ಆಸ್ಟ್ರೇಲಿಯದಲ್ಲಿರುವ ಭಾರತೀಯ ರಾಯಭಾರ ಅಥವಾ ಹೈಕಮಿಷನ್ ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿದೆ. ಇದೆಲ್ಲ ಸಂಗತಿಗಳಿಗಿಂತ ಹೆಚ್ಚಾಗಿ ಗಮನ ಹರಿಸಬೇಕಾಗಿರುವುದು ಇಷ್ಟು ದಿನಗಳವರೆಗೆ ಪಂಜಾಬ್ ಸರಕಾರ ಅಮೃತ್ ಪಾಲ್ ಸಿಂಗ್ ಬಗ್ಗೆ ಮೌನವಹಿಸಿದ್ದು ಏಕೆ? ಅಲ್ಲಿನ ಗುಪ್ತಚರ ವಿಭಾಗ ಏನು ಮಾಡುತ್ತಿತ್ತು? ಪೊಲೀಸರು ಏನು ಮಾಡುತ್ತಿದ್ದರು? ಈ ಎಲ್ಲ ಪ್ರಶ್ನೆಗಳು ಉದ್ಭವವಾಗಿವೆ. ಗುಪ್ತಚರ ಮೂಲಗಳ ಪ್ರಕಾರವೇ ಅಮೃತ್ ಸಿಂಗ್ ಪಾಕಿಸ್ಥಾನದ ಐಎಸ್‌ಐನಿಂದ ತರಬೇತಿ ಪಡೆದುಕೊಂಡು ಭಾರತಕ್ಕೆ ಬಂದಿದ್ದಾನೆ. ಅಲ್ಲದೆ ಮೊದಲಿನಿಂದಲೂ ಖಲಿಸ್ಥಾನ ಪರ ಮೃದು ಧೋರಣೆ ಹೊಂದಿದ್ದಾನೆ ಎಂಬುದೂ ಗೊತ್ತಿತ್ತು. ಹೀಗಿದ್ದಾಗ್ಯೂ ಪಂಜಾಬ್‌ನಲ್ಲಿ ಮತ್ತೆ ಖಲಿಸ್ಥಾನಿ ಆಂದೋಲನ ಚಿಗುರಲು ಅವಕಾಶ ಕೊಟ್ಟಿದ್ದಾದರೂ ಹೇಗೆ ಎಂಬ ಪ್ರಶ್ನೆಗಳೂ ಹುಟ್ಟಿವೆ.
ಏನೇ ಆಗಲಿ ಯಾವುದೇ ಪಕ್ಷಗಳು ರಾಜಕೀಯಕ್ಕೋಸ್ಕರ ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಬೆಂಬಲ ನೀಡುವುದು ಅಥವಾ ಅವುಗಳ ಮೇಲೆ ಮೃದು ಧೋರಣೆ ಹೊಂದುವುದು ಸರ್ವಥಾ ಒಳ್ಳೆಯದಲ್ಲ. ಇದರಿಂದ ರಾಷ್ಟ್ರದ ಆಂತರಿಕ ಭದ್ರತೆಗೆ ಅಪಾಯವೇ ಹೆಚ್ಚು. ಹೀಗಾಗಿ ಇಂಥ ಸಂಘಟನೆಗಳನ್ನು ಬೆಳೆಯುವ ಮೊದಲೇ ಚಿವುಟುವ ಬಗ್ಗೆ ಯೋಚಿಸಬೇಕು.