ಹಾನಗಲ್ಲ: ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮುಂಜಾಗ್ರತಾ ಕ್ರಮವನ್ನು ಕಾಯ್ದುಕೊಳ್ಳುವ ಜೊತೆಗೆ ಮಾಧ್ಯಮಗಳ ಮುಖಾಂತರ ತಿಳಿಸುವುದರಿಂದ ಜನರಿಗೆ ಅರಿವು ಮೂಡಿಸಿದಂತಾಗುತ್ತದೆ ಎಂದು ಶಾಸಕ ಸಿ.ಎಮ್.ಉದಾಸಿ ಹೇಳಿದರು.
ಶುಕ್ರವಾರ ಹಾನಗಲ್ಲ ಪಟ್ಟಣದ ಕುಡಿಯುವ ನೀರಿನ ಜಲಮೂಲವಾದ ಆನಿಕೇರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಗಪ್ಪಿ ಮೀನು ಹಾಗೂ ಗಂಬುಸಿಯಾ ಮೀನಿನ ಮರಿಗಳನ್ನು ಕೆರೆಗೆ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಈಗಾಗಲೆ ಚಿಕನ್‌ಗುನ್ಯಾ, ಡೆಂಘೀ, ಮಲೇರಿಯಾದಂತ ರೋಗಗಳು ಉಲ್ಬಣಿಸಿದ್ದು ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಇಲಾಖೆ ಜನರ ಆರೋಗ್ಯ ಕಡೆಗೆ ಗಮನಹರಿಸಿ ಕಾಲಕ್ಕೆ ತಕ್ಕಂತೆ ಆರೋಗ್ಯ ಜಾಗೃತಿ ಹಾಗೂ ಔಷದೋಪಚಾರಕ್ಕೆ ಮುಂದಾಗಬೇಕು. ಸೊಳ್ಳೆಗಳ ನಿಯಂತ್ರಣ, ನೀರಿನ ಸ್ವಚ್ಛತೆ ಬಗ್ಗೆ ಇಲಾಖಾ ಅಧಿಕಾರಿಗಳು ನಿಯಂತ್ರಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಕೀಟ ಶಾಸ್ತ್ರ ತಜ್ಞೆ ಇಂದ್ರಾ ಪಾಟೀಲ ಮಾತನಾಡಿ, ಗಪ್ಪಿ ಮೀನು ಮತ್ತು ಗಂಬುಸಿಯಾ ಮೀನಿನ ಮರಿಗಳನ್ನು ಕೆರೆಗಳಿಗೆ ಬಿಡುವುದರಿಂದ ದಡದಲ್ಲಿರುವ ಸೊಳ್ಳೆಗಳನ್ನು ತಿಂದು ರೋಗ ಹರಡುವುದನ್ನು ನಿಯಂತ್ರಣ ಮಾಡುತ್ತವೆ. ಈಗಾಗಲೆ ತಾಲೂಕಿನ ವಿವಿಧ ಕೆರೆಗಳಿಗೆ ಇಂತಹ ಮೀನಿನ ಮರಿಗಳನ್ನು ಬಿಡಲಾಗಿದ್ದು, ಮೀನುಗಳ ಜೀವಿತಾವಧಿ 3 ರಿಂದ 5 ವರ್ಷ. ದಿನಕ್ಕೆ 300 ರಿಂದ 400 ಲಾರ್ವಾಗಳನ್ನು ತಿಂದು ಬದುಕುತ್ತವೆ. ಹೀಗಾಗಿ ಡೆಂಘೀನಂತಹ ಸಾಂಕ್ರಾಮಿಕ ರೋಗ ತಡೆಗೆ ಈ ಮೀನುಗಳು ಸಹಕಾರಿ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಮೇಲ್ವಿಚಾರಕ ನಿಂಗಪ್ಪ ಎನ್.ಎಚ್ ಮಾತನಾಡಿ, ತಾಲೂಕಿನಲ್ಲಿ 12ಜನರಿಗೆ ಚಿಕನ್‌ಗುನ್ಯಾ ತಗುಲಿರುವ ವರದಿಯಾಗಿದೆ. 36 ಜನರನ್ನು ಶಂಕೆಯ ಮೇಲೆ ಪರೀಕ್ಷೆ ನಡೆಸಲಾಗಿದೆ. 6 ಜನರಲ್ಲಿ ಡೆಂಘೀ ಪತ್ತೆಯಾಗಿದ್ದು, 10 ಜನರಿಗೆ ಇರುವ ಸಂಶಯವಿದೆ. ಇನ್ನು ಮಲೇರಿಯಾ 9 ಜನರಿಗೆ ತಗುಲಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಮಲೇರಿಯಾ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮಕ್ಕೆ ಶಾ ಕಾರ್ಯಕರ್ತರಿಂದ ಮನೆ ಮನೆಗೆ ಭೇಟಿ ನೀಡಿ ಜಾರ್ಗತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಚನ್ನಬಸಪ್ಪ ಹೆಡಿಯಾಲ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕಸ್ತೂರವ್ವ ಬೊಮ್ಮನಹಳ್ಳಿ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಿ.ಎಸ್.ನೇಗಳೂರ. ಡಾ| ರವೀಂದ್ರ ಗೌಡ ಪಾಟೀಲ, ಹಾದಿಮನಿ, ಕಲ್ಯಾಣ ಕುಮಾರ ಶೆಟ್ಟರ, ಸಂತೋಷ ಪಾಂಡೆ, ಸುಭಾಸ್ ಚೊಗಚಿಕೊಪ್ಪ, ರಾಜು ಅಂಬಿಗೇರ. ಪರಶುರಾಮ ನಿಂಗೋಜಿ ಇತರರಿದ್ದರು.