Advertisement

ಮಳೆಹಾನಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ

04:38 PM May 27, 2022 | Team Udayavani |

ಶಿವಮೊಗ್ಗ: ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಅನಾಹುತಗಳು ಮುಂಬರುವ ಮಳೆಗಾಲದಲ್ಲಿ ಮರುಕಳಿಸ ದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣ ದಿಂದಲೇ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗುರುವಾರ ಅತಿವೃಷ್ಟಿ ಹಾನಿ ಕುರಿತು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಶಿವಮೊಗ್ಗ ನಗರದ ರಾಜಕಾಲುವೆ, ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಸಂಪೂರ್ಣ ತೆಗೆದು ಸ್ವಚ್ಛಗೊಳಿಸಬೇಕು. ಇದೇ ರೀತಿ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸಬೇಕು. ಇತ್ತೀಚೆಗೆ ಸುರಿದ ಮಳೆಯಿಂದ ಮತ್ತೆ ಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿರುವ ಸಾಧ್ಯತೆಯಿದ್ದು, ಶೀಘ್ರ ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಿ. ನಗರದಲ್ಲಿ ನೆರೆ ಪರಿಸ್ಥಿತಿ ಎದುರಿಸಲು ವಾರ್ಡ್‌ವಾರು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಕಾಲುವೆ ಪ್ರದೇಶ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಹಾಗೂ ಕಟಾವು ನಂತರ ಹಾನಿಗೀಡಾಗಿರುವ ಬೆಳೆಗಳಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಹಾನಿಗೀಡಾಗಿರುವ ಎಲ್ಲಾ ಕೆರೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಅಲ್ಲದೇ ಎಲ್ಲಾ ಕೆರೆಗಳನ್ನು ಪರಿಶೀಲಿಸಿ, ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಮಾಹಿತಿ ನೀಡಿ, ನಗರದಲ್ಲಿ ಹಾದು ಹೋಗಿರುವ ತುಂಗಾ ಚಾನೆಲ್‌ನಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನಗರದಲ್ಲಿ ಸುಮಾರು 4ಸಾವಿರ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ್ದು, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲು ಚಾಲನೆ ನೀಡಲಾಗಿದೆ. ಬೆಳೆ ಹಾನಿ ಕುರಿತು ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದು, ಪರಿಹಾರವನ್ನು ಆದಷ್ಟು ಬೇಗ ವಿತರಿಸಲಾಗುವುದು. ಮಾನವ ಪ್ರಾಣ ಹಾನಿ ಹಾಗೂ ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ಪರಿಹಾರವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಮಳೆಯಿಂದ ತೊಂದರೆಗೊಳಗಾಗ ಬಹುದಾದ 93 ಗ್ರಾ.ಪಂ.ಗಳನ್ನು ಗುರುತಿಸಲಾಗಿದ್ದು, ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳನ್ನು ಪರಿಶೀಲಿಸಲು ಹಾಗೂ ಮೆಶ್‌ ಅಳವಡಿಸಿ ಮೀನುಗಾರಿಕೆ ನಡೆಸುವ ಮೂಲಕ ಕೆರೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯರ್ನಿಹಣಾಧಿಕಾರಿ ವೈಶಾಲಿ ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಲಾಗಿರುವ ಕ್ರಿಯಾ ಯೋಜನೆಗಳ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ| ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next