ಚಾಮರಾಜನಗರ: ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಗಾಗಿ ಬಂದಿರುವ ಅರ್ಜಿಗಳನ್ನು ವಿಳಂಬ ನೀತಿ ಅನುಸರಿಸದೇ ಶೀಘ್ರ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಮರಿಯಾಲದ ಜೆಎಸ್‌ಎಸ್ ರುಡ್‌ಸೆಟ್ ಸಂಸ್ಥೆ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬ್ಯಾಂಕ್ ಆಧಿಕಾರಿಗಳಿಗೆ ಜೆಎಸ್‌ಎಸ್ ರುಡ್‌ಸೆಟ್‌ನಲ್ಲಿ ನಡೆದ ಮುಖ್ಯಮಂತ್ರಿ ಉದೊೃಜನ ಯೋಜನೆ (ಸಿಎಂಇಜಿಪಿ) ಮತ್ತು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಕುರಿತು ನಡೆದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ಯಾಂಕ್‌ಗಳಿಗೆ ಇಲಾಖೆಗಳಿಂದ ಬರುವ ಸಾಲ ಸೌಲಭ್ಯದ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಮಂಜೂರು ಮಾಡುವ ಪ್ರಕ್ರಿಯೆ ಆಗಬೇಕು. ನಿರುದ್ಯೋಗಿ ಅಭ್ಯರ್ಥಿಗಳು ಸಲ್ಲಿಸುವ ಆರ್ಥಿಕ ನೆರವಿನ ಕೋರಿಕೆಗಳನ್ನು ಇತ್ಯರ್ಥಪಡಿಸಲು ವಿಳಂಬ ಮಾಡಬಾರದು. ಸ್ವಯಂ- ಉದ್ಯೋಗ ಬಯಸಿ ಸಾಲ ಸೌಲಭ್ಯಕ್ಕಾಗಿ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳನ್ನು ಶೀಘ್ರ ಗಮನಿಸಿ ಕ್ರಮವಹಿಸಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಜಿಲ್ಲೆಯ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮುರುಳೇಶ್ ಮಾತನಾಡಿ, ಕೈಗಾರಿಕಾ ಸ್ಥಾಪನೆಗೆ ಸಾಲ ಅನುಮೋದನೆ ಪ್ರಕ್ರಿಯೆಯನ್ನು ಬ್ಯಾಂಕುಗಳು ಮತ್ತಷ್ಟು ತ್ವರಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ಕೆಲಸಗಳಿಗೆ ತೊಡಕುಂಟಾಗುತ್ತದೆ. ಬ್ಯಾಂಕ್ ಸಾಲಕ್ಕೆ ಅನುಮೋದನೆ ದೊರೆತ ನಂತರ ರುಡ್‌ಸೆಟ್ ಅಂಥ ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟು, ಪ್ರಮಾಣ ಪತ್ರವನ್ನು ನೀಡುತ್ತದೆ. ಈ ಪ್ರಮಾಣ ಪತ್ರಗಳನ್ನು ಬ್ಯಾಂಕ್‌ಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ನಂತರ ಹಣವನ್ನು ಬ್ಯಾಂಕ್‌ಗಳು ಮಂಜೂರು ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆರ್‌ಬಿಓ-ಎಸ್‌ಬಿಐನ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಾಬು ಬಳಗನೂರು ಮಾತನಾಡಿ, ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆ ಮತ್ತು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ಪ್ರಕ್ರಿಯೆಯನ್ನು ಈಗ ಡಿಜಿಟಲ್ ಮಾದರಿಯನ್ನಾಗಿ ಪರಿವರ್ತಿಸಲಾಗಿದ್ದು, ಮ್ಯಾನುವಲ್ ಪದ್ಧತಿಯಲ್ಲಿದ್ದ ಎಲ್ಲಾ ಅಡ್ಡಿಗಳನ್ನು ಸರಿಪಡಿಸಲಾಗಿದೆ. ಸದ್ಯ ಈ ಕೆಲಸ ಆನ್‌ಲೈನ್‌ನಲ್ಲಿ ಆಗುವುದರಿಂದ ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕರಿಗೆ ಹೆಚ್ಚು ಸಮಯ ತೆಗೆದುಕೊಳ್ಳದೇ ಸೌಲಭ್ಯವನ್ನು ಒದಗಿಸಬೇಕು ಎಂದು ತಿಳಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ಸುನಂದಾ ಕಟ್ಟಿಮನಿ, ಬೆಂಗಳೂರು ಕೆವಿಐಸಿ ಜಿಲ್ಲಾ ಸಂಯೋಜನಾಧಿಕಾರಿ ಎನ್. ಪ್ರಭಾಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವೆಂಕಟೇಶ್, ಜೆಎಸ್‌ಎಸ್ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಕೆ. ಚಂದ್ರಶೇಖರ್ ಇತರರು ಇದ್ದರು.