Advertisement

ಜೋಜಿಲ್ಲಾ ಪಾಸ್‌ ಸುರಂಗ ರಸ್ತೆ 2023ರಲ್ಲಿ ಪೂರ್ಣ

01:19 AM Sep 29, 2021 | Team Udayavani |

ಉದಯವಾಣಿ ಪ್ರತಿನಿಧಿ- ಸೋನಾಮಾರ್ಗ (ಶ್ರೀನಗರ): ಲೇಹ್‌ ಮತ್ತು ಲಡಾಖ್‌ಗೆ ಶ್ರೀನಗರದಿಂದ ಸಂಪರ್ಕ ಕಲ್ಪಿಸುವ ಅತ್ಯಂತ ಮಹತ್ವದ ಮತ್ತು ಏಷ್ಯಾದ ಅತೀ ದೊಡ್ಡ ಜೋಜಿಲ್ಲಾ ಪಾಸ್‌ ಸುರಂಗ ರಸ್ತೆ ನಿರ್ಮಾಣ ಕಾರ್ಯ 2023ರ ಡಿಸೆಂಬರ್‌ನೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ.

Advertisement

ಈ ಸುರಂಗ ರಸ್ತೆ ಪೂರ್ಣ ಗೊಂಡರೆ ಲೇಹ್‌ – ಲಡಾಖ್‌ಗೆ ವರ್ಷಪೂರ್ತಿ ಸಂಪರ್ಕ ಸಾಧ್ಯವಾಗಲಿದೆ. ಹಿಮಪಾತದಂಥ ಕಾರಣಗಳಿಂದ ಪ್ರಸ್ತುತ ನವೆಂಬರ್‌ನಿಂದ ಎಪ್ರಿಲ್‌ವರೆಗೆ ಲೇಹ್‌- ಲಡಾಖ್‌ ಪ್ರದೇಶವು ದೇಶದ ಜತೆಗೆ ಸಂಪರ್ಕ ಕಡಿದುಕೊಳ್ಳುತ್ತಿದೆ. ಇದು ಲಡಾಖ್‌ ಮತ್ತು ಕಾಶ್ಮೀರದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತಿದೆ.

ಮಂಗಳವಾರ ಬಲ್ತಾಳ್‌ ಬಳಿಯ ಜೋಜಿಲ್ಲಾ ಪಾಸ್‌ನಲ್ಲಿ ನಿರ್ಮಾಣ ಹಂತದ ಸುರಂಗ ಕಾಮಗಾರಿ ಸಹಿತ ಶ್ರೀನಗರ ವ್ಯಾಪ್ತಿಯ ರಸ್ತೆ ಕಾಮಗಾರಿ ಪರಿಶೀಲಿಸಿದ ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಉದ್ದೇಶಿತ ಅವಧಿಗೆ ಮುನ್ನ ಕಾಮಗಾರಿ ಪೂರ್ಣ ಗೊಳಿ ಸುವಂತೆ ಗುತ್ತಿಗೆದಾರ ಕಂಪೆನಿಗೆ ಸೂಚಿಸಿದೆ ಎಂದರು.

ಈ ಸುರಂಗವು ಶ್ರೀನಗರದಿಂದ ಲೇಹ್‌-ಲಡಾಖ್‌ಗೆ ಸಂಪರ್ಕ ಕಲ್ಪಿಸುವ ಬಲ್ತಾಳ್‌-ಮೀನಾ ಮಾರ್ಗ ನಡುವಿನ ರಸ್ತೆ ಅಭಿವೃದ್ಧಿಯ ಭಾಗವಾಗಿದೆ. ಜೋಜಿಲ್ಲಾ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ಸಂಸ್ಥೆ ಹೈದರಾಬಾದ್‌ನ ಮೇಘಾ ಎಂಜಿನಿಯರಿಂಗ್‌ ಆ್ಯಂಡ್‌ ಇನಾಸ್ಟ್ರಕ್ಚರ್ ಲಿ. (ಎಂಇಐಎಲ್‌) ಗೆ 2027ರ ವರೆಗೆ ಅವಕಾಶ ಇದೆ. ಆದರೆ 2023ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಗಡ್ಕರಿ ತಿಳಿಸಿದರು.

ಅಪರೂಪದ ತಾಂತ್ರಿಕ ಕೌಶಲ: ವಿಶ್ವದಲ್ಲೇ ಅಪರೂಪವೆನಿಸುವ ತಾಂತ್ರಿಕ ಕೌಶಲಗಳನ್ನು ಬಳಸಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇಟಲಿ, ನಾರ್ವೆ ಮುಂತಾದ ರಾಷ್ಟ್ರಗಳಲ್ಲಿ ಸುರಂಗ ನಿರ್ಮಿಸಲು ಬಳಸಲಾದ ತಾಂತ್ರಿಕತೆ ಯನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳ ಲಾಗಿದೆ. ಗುತ್ತಿಗೆ ವಹಿಸಿಕೊಂಡ ಕಂಪೆನಿಯು ಗುಣಮಟ್ಟ ವನ್ನು ಕಾಯ್ದುಕೊಳ್ಳಲು ಹೆಚ್ಚಿನ ಗಮನ ಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

4,500 ಕೋಟಿ ರೂ. ವೆಚ್ಚದಲ್ಲಿ ಈ ಸುರಂಗ ನಿರ್ಮಾಣವಾಗಲಿದೆ. ಇದರಿಂದ ಲಡಾಖ್‌ಗೆ ವರ್ಷಪೂರ್ತಿ ಸಂಪರ್ಕ ಸಾಧ್ಯವಾಗಲಿದೆ. ಈ ಯೋಜನೆ ದೇಶದ ರಕ್ಷಣ ವಲಯದ ದೃಷ್ಟಿಯಿಂದಲೂ ಮಹತ್ವದ್ದು ಎಂದರು.

ಇದನ್ನೂ ಓದಿ:ಡಿಜಿಟಲ್‌ ಇಂಡಿಯಾ ಮೇಲ್ಪರ್ಜೆಗೆ?

ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಜಮ್ಮು- ಕಾಶ್ಮೀರವನ್ನು ಸ್ವಿಟ್ಸರ್‌ಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಗುಲ್ಮಾರ್ಗ್‌ ನಿಂದ ಪಹಲ್ಗಾಂವ್‌ಗೆ ನೇರ ರಸ್ತೆ, ಜಮ್ಮುವಿನಿಂದ ರಾಜ್ಯದ ಮತ್ತಿತರ ಭಾಗಗಳಿಗೆ ಸಂಪರ್ಕ ಕಲ್ಪಿಸುವುದರ ಸಹಿತ ಹತ್ತು ಹಲವು ರಸ್ತೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಸುಮಾರು 6 ಲಕ್ಷ ಕೋ.ರೂ.ಗಳಷ್ಟು ಹಣವನ್ನು ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ. ಜಮ್ಮು ಮತ್ತು ಶ್ರೀನಗರದ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಹಾಯಕ ಸಚಿವ ವಿ.ಕೆ. ಸಿಂಗ್‌, ಎನ್‌ಆರ್‌ಡಿಸಿಐಎಲ್‌ ಆಧಿಕಾರಿಗಳು, ಎಂಇಐಎಲ್‌ ಕಾರ್ಯಕಾರಿ ನಿರ್ದೇಶಕ ಪಿ.ವಿ. ಕೃಷ್ಣಾರೆಡ್ಡಿ, ಯೋಜನೆ ನಿರ್ದೇಶಕ ಪಿ. ಸುಬ್ಬಯ್ಯ ಉಪಸ್ಥಿತರಿದ್ದರು.

ರೇಷ್ಮೆ ಮಾರ್ಗ: ಲೇಹ್‌ ಮತ್ತು ಲಡಾಖ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ವಾಣಿಜ್ಯ ಮಾರ್ಗವಾದ ಇದಕ್ಕೆ ರೇಷ್ಮೆ ಮಾರ್ಗ (ಸಿಲ್ಕ್ ರೂಟ್‌) ಎಂದೇ ಹೆಸರು. ಈ ಜೊಜಿಲ್ಲಾ ಸುರಂಗ ರಸ್ತೆ ನಿರ್ಮಾಣದಿಂದ ಈ ಮಹತ್ವದ ವಾಣಿಜ್ಯ ಮಾರ್ಗ ವರ್ಷಪೂರ್ತಿ ಕಾರ್ಯನಿರ್ವಹಿಸಲಿದೆ.

ಇದರೊಂದಿಗೆ ಹಿಮಪಾತದಂಥ ಘಟನೆಗಳಿಂದ ರಸ್ತೆ ಸಂಪೂರ್ಣವಾಗಿ ಮುಚ್ಚುವುದರಿಂದ ಅನಿವಾರ್ಯ ಪರಿಸ್ಥಿತಿಗಳಲ್ಲಿ ಭಾರತೀಯ ಸೇನೆ ಲೇಹ್‌-ಲಡಾಖ್‌ನಂಥ ದೇಶದ ಗಡಿ ಭಾಗಗಳಿಗೆ ತೆರಳಲು ಸುತ್ತುಬಳಸಿ ಹೋಗಬೇಕಾಗುತ್ತಿದೆ. ಈ ಮಾರ್ಗಗಳು ಪಾಕಿಸ್ಥಾನ ಮತ್ತು ಚೀನ ಗಡಿಯಲ್ಲಿ ಹಾದುಹೋಗುವುದರಿಂದ ದೇಶದ ಭದ್ರತೆಯ ದೃಷ್ಟಿಯಿಂದಲೂ ಪ್ರಮುಖ ಯೋಜನೆ. ಸುರಂಗ ಮಾರ್ಗ ಪೂರ್ಣಗೊಂಡರೆ ಸೇನೆಯ ಸಾಗಣೆಗೂ ಅನುಕೂಲವಾಗಲಿದೆ. ಲೇಹ್‌ ಮತ್ತು ಶ್ರೀನಗರ ನಡುವಿನ ಪ್ರಯಾಣ ಸಮಯ ಗಮನಾರ್ಹವಾಗಿ ಇಳಿಕೆಯಾಗಲಿದೆ.

ಕಾಶ್ಮೀರ ಮತ್ತು ಲಡಾಖ್‌ ನಡುವೆ ಹೆದ್ದಾರಿ ನಿರ್ಮಿಸಿ ಸಂಪರ್ಕ ಸಾಧಿಸುವ ಕೇಂದ್ರ ಸರಕಾರದ ಚಿಂತನೆಗೆ ಪರ್ಯಾಯವಾಗಿ ಶ್ರೀನಗರದಿಂದ ಬಲ್ತಾಳ್‌ಗೆ ಹೆದ್ದಾರಿ ನಿರ್ಮಿಸುವ ಯೋಜನೆ ರೂಪುಗೊಂಡಿತು. ಅದರಡಿ ಈ ಜೋಜಿಲ್ಲಾ ಪಾಸ್‌ ಸುರಂಗ ರಸ್ತೆ ನಿರ್ಮಾಣ ಪ್ರಮುಖ ವಾದುದು. ಇದು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೂ ಹೌದು.

ಈ ಸುರಂಗ ನಿರ್ಮಾಣದಿಂದ ಬಲ್ತಾಳ್‌ನಿಂದ ಮೀನಾ ಮಾರ್ಗ ನಡುವಿನ 40 ಕಿ.ಮೀ. ಅಂತರ ಕಡಿತಗೊಂಡು 13 ಕಿ.ಮೀ. ಆಗಲಿದೆ.

ಅತೀ ಉದ್ದದ ಸುರಂಗ ರಸ್ತೆ: ಜೋಜಿಲ್ಲಾ ಪಾಸ್‌ ಸುರಂಗ ರಸ್ತೆ 14.15 ಕಿ.ಮೀ.ನಷ್ಟಿದ್ದು, ಇದು ದೇಶದ ಅತೀ ಉದ್ದದ ಸುರಂಗ ರಸ್ತೆ ಮತ್ತು ಏಷ್ಯಾದ ಅತೀ ದೊಡ್ಡ ದ್ವಿಮುಖ ಸುರಂಗ ರಸ್ತೆಯಾಗಲಿದೆ. ಒಟ್ಟು 33 ಕಿ.ಮೀ.ಗಳ ಈ ಕಾಮಗಾರಿಯನ್ನು ಎರಡು ಭಾಗಗಳಾಗಿ ವಿಂಗಡಿಸ ಲಾಗಿದ್ದು, ರಾಷ್ಟ್ರೀಯ ಹೆದ್ದಾರಿ- 1ರ ಜಡ್ಮೋರನ್ನು ಸಂಪರ್ಕಿಸಲು ಸೋನಾಮಾರ್ಗ್‌ ಮತ್ತು ಕಾರ್ಗಿಲ್‌ ನಡುವಿನ ಜೋಜಿಲ್ಲಾ ಘಾಟಿಯ ಈ ಸುರಂಗ ನಿರ್ಮಾಣ ಮಹತ್ವಾದ್ದಾಗಿದೆ. ಮೊದಲ ಭಾಗವಾಗಿ 18.475 ಕಿ.ಮೀ. ರಸ್ತೆ ಪೈಕಿ ಜಡ್ಮೋರ್‌ ಮತ್ತು ಜೋಜಿಲ್ಲಾ ನಡುವಿನ ರಸ್ತೆ ಕಾಮಗಾರಿಯಾಗಿದೆ. ಈ ಯೋಜನೆಯಡಿ ಈಗಿನ 3.01 ಕಿ.ಮೀ. ರಸ್ತೆಯನ್ನು ಅಗಲಗೊಳಿಸಿ, 13.842 ಕಿ.ಮೀ. ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸಲಾಗುವುದು.ಜೋ

ಈ ಹೆದ್ದಾರಿಯು ಎರಡು ಅವಳಿ ಸುರಂಗ ಮಾರ್ಗಗಳನ್ನು ಹೊಂದಲಿದೆ. ಮೊದಲ ಅವಳಿ ಸುರಂಗ 435 ಮೀ. ಉದ್ದದ್ದಾದರೆ, ಎರಡನೇ ಮಾರ್ಗವು 1,950 ಮೀ. ಉದ್ದದ್ದದಾಗಿದೆ. ಒಟ್ಟು 18.475 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಲಿದೆ.

ಎರಡನೇ ಭಾಗದಲ್ಲಿ ಒಟ್ಟು 14.15 ಕಿ.ಮೀ. ಜೋಜಿಲ್ಲಾ ಸುರಂಗ ಮಾರ್ಗ ನಿರ್ಮಾಣ ಕಾರ್ಯ ನಡೆಯಲಿದೆ. ಅತ್ಯಾಧುನಿಕ ತಂತ್ರಜ್ಞಾನ ವನ್ನು ಈ ಸುರಂಗ ಮಾರ್ಗದಲ್ಲಿ ಬಳಸಿದ್ದು, ಸ್ವಯಂಚಾಲಿತ ಬೆಳಕು, ತುರ್ತು ಬೆಳಕಿನ ಸೌಲಭ್ಯ, ಸಂದೇಶ ರವಾನೆ, ತುರ್ತು ದೂರವಾಣಿ ಮತ್ತು ರೇಡಿಯೋ ವ್ಯವಸ್ಥೆ ಹೊಂದಿರಲಿದೆ.

ಹವಾಮಾನ ವೈಪರೀತ್ಯವೇ ಸವಾಲು
ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿ ಇರುವ ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯವೇ ದೊಡ್ಡ ಸವಾಲು. ಭಾರೀ ಹಿಮಪಾತ, ಶೀತ ವಾತಾವರಣ, ಎಂಟು ತಿಂಗಳ ಕಾಲ ಎಲ್ಲೆಲ್ಲೂ ಆವರಿಸಿರುವ ಹಿಮ, ಕಾಮಗಾರಿ ವೇಳೆ ನೀರಿನ ಒಳಹರಿವು, ಮೈನಸ್‌ 45 ಡಿಗ್ರಿ ಸೆ. ವಾತಾವರಣದಲ್ಲಿ ಕೆಲಸ ಮಾಡುವ ಅನಿವಾರ್ಯ ಇದೆ. 1989ರಲ್ಲಿ ಸಣ್ಣ ಫ್ಯಾಬ್ರಿಕೇಷನ್‌ ಘಟಕದೊಂದಿಗೆ ಆರಂಭವಾದ ಎಂಇಐಎಲ್‌ ಸಂಸ್ಥೆಯು ಸಂಸ್ಥೆಯು ಇಂದು ವಿಶ್ವದ 20 ರಾಷ್ಟ್ರಗಳಲ್ಲಿ ಕಾಮಗಾರಿ ನಿರ್ವಹಿಸುತ್ತಿದೆ. ನೀರಾವರಿ, ಇಂಧನ ಮತ್ತು ಅನಿಲ, ಸಾಗಾಣಿಕೆ, ವಿದ್ಯುತ್‌, ದೂರಸಂಪರ್ಕ, ವೈಮಾನಿಕ ಮತ್ತು ರಕ್ಷಣ ಕ್ಷೇತ್ರದಲ್ಲಿ ಹಿರಿಮೆ ಸಾಧಿಸಿದೆ. ತೆಲಂಗಾಣದ ಕಾಳೇಶ್ವರಂ ಯೋಜ ನೆಯನ್ನು ಪೂರ್ಣಗೊಳಿಸಿದೆ.

ಏಕೆ ವಿಶೇಷ?
– 11,578 ಅಡಿ ಎತ್ತರದಲ್ಲಿ ರಸ್ತೆ ನಿರ್ಮಾಣ. ವಿಶ್ವದಲ್ಲೇ ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿರುವ ರಸ್ತೆಯೆಂಬ ಹೆಗ್ಗಳಿಕೆ.
-ಸತತ ಹಿಮಪಾತ ಮತ್ತು ಹವಾಮಾನವೇ ದೊಡ್ಡ ಸವಾಲು.
– ಶ್ರೀನಗರ ಮತ್ತು ಲೇಹ್‌ ನಡುವೆ ವರ್ಷಪೂರ್ತಿ ಸಂಪರ್ಕ, ಕಾಶ್ಮೀರ ಕಣಿವೆ ಅಭಿವೃದ್ಧಿಗೆ ಪೂರಕ.
– ರಸ್ತೆ ನಿರ್ಮಾಣದುದ್ದಕ್ಕೂ ಯೂರೋಪ್‌ ತಂತ್ರಜ್ಞಾನ ಬಳಕೆ.

Advertisement

Udayavani is now on Telegram. Click here to join our channel and stay updated with the latest news.

Next