ಬೆಂಗಳೂರು: ರಾಜ್ಯಾದಲ್ಲಿ ಖಾಸಗಿ ಆಸ್ಪತ್ರೆಗಳು ಪಟ್ಟಭದ್ರರ ಹಿಡಿತದಲ್ಲಿರುವ ಕಾರಣ ಸರ್ಕಾರದ ಆದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಬಡವರಿಗೆ ಹಳ್ಳಿಗಾಡಿನ ಜನರಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ. ಹಾಸಿಗೆ, ಅಮ್ಲಜನಕ, ವೆಂಟಿಲೇಟರ್ ಇಲ್ಲ ಎನ್ನುತ್ತಾರೆ. ಕಷ್ಟಪಟ್ಟು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೂ ಚಿಕಿತ್ಸೆ ಫಲಕಾರಿಯಾಗದೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಸೇವಾ ಮನೋಭಾವನೆ ಕಡಿಮೆಯಾಗಿ ಹಣ ದೋಚುವ ದಂಧೆ ಹೆಚ್ಚುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೋವಿಡ್ ತುರ್ತುಪರಿಸ್ಥಿತಿ ಜಾರಿ ಮಾಡಿ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಕನಿಷ್ಠ ಆರು ತಿಂಗಳಕಾಲ ಸರ್ಕಾರದ ನಿಯಂತ್ರಣಕ್ಕೆ ಪಡೆದುಕೊಳ್ಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗತಿ ಆಸ್ಪತ್ರೆಗಳನ್ನು ಸರ್ಕಾರ ನಿಯಂತ್ರಣಕ್ಕೆ ಪಡೆದರೆ, ಕೋವಿಡ್ ಸೋಂಕಿತ ಬಡವರಿಗೆ ಸುಲಭವಾಗಿ ಚಿಕಿತ್ಸೆ ಕೊಡಿಸಲು ರೋಗಿಗಳಿಂದ ನಿರ್ದಿಷ್ಟ ಪಡಿಸಿದ ಹಣ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಅದಲ್ಲದೆ ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ ರೋಗಿಯ ಹಣ ಪಾವತಿ ಮನ್ನಾ ಮಾಡಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ:‘ಬೇಲಿ ಹಾಕಿದರೂ ಬುದ್ದಿ ಬಂದಿಲ್ಲ’: ನೇತ್ರಾವತಿ ನದಿಗೆ ಕಸ ಎಸೆಯುವ ಮಹಿಳೆಯ ವಿಡಿಯೋ ವೈರಲ್
ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ತಾಲೂಕು ಮಟ್ಟದಲ್ಲಿರುವ ಕೋವಿಡ್ ಕೇಂದ್ರಗಳು ಸಾಕಾಗುತ್ತಿಲ್ಲ. ಆದ್ದರಿಂದ ಹಳ್ಳಿಯ ಜನ ನಗರ ಪ್ರದೇಶಗಳಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗಾಗಿ ಹುಡುಕಾಡುತ್ತಿದ್ದಾರೆ. ಆಸ್ಪತ್ರೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಹೆಚ್ಚುವರಿಯಾಗಿ ಕೋವಿಡ್ ಕೇಂದ್ರಗಳನ್ನು ಹಾಗೂ ತಾಲೂಕು ಮಟ್ಟದ ವಾರ್ ರೂಮ್ ತುರ್ತಾಗಿ ತೆರೆಯಬೇಕು ಈ ಕೇಂದ್ರಗಳಿಗೆ ನಿವೃತ್ತ ವೈದ್ಯರ ಸೇವೆಯನ್ನ ಬಳಸಿಕೊಳ್ಳಬೇಕು ಎಂದರು.
ರೈತರ ಕೃಷಿ ಉತ್ಪನ್ನಗಳಿಗೆ ಖರೀದಿದಾರರು ಇಲ್ಲದೆ ಬೆಲೆ ಕುಸಿತವಾಗುತ್ತಿರುವ ಕಾರಣ ಸರ್ಕಾರವೇ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸುವಂತಾಗಬೇಕು. ಈ ಮೂಲಕ ರೈತರ ರಕ್ಷಣೆ ಮಾಡಬೇಕು. ಸರ್ಕಾರಕ್ಕೆ ಇದು ಸಾಧ್ಯವಾಗದಿದ್ದರೆ ಕೃಷಿ ಕ್ಷೇತ್ರವನ್ನು ಲಾಕ್ ಡೌನ್ ವ್ಯಾಪ್ತಿಗೆ ಸೇರಿಸಿ ಕೃಷಿ ಚಟುವಟಿಕೆ ನಿಲ್ಲಿಸಿ ರೈತರು ಮತ್ತಷ್ಟು ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಿ ಎಂದು ಅವರು ಒತ್ತಾಯಿಸಿದರು