ಚಿಕ್ಕಬಳ್ಳಾಪುರ: ಕಾನೂನು ಅರಿವಿಲ್ಲದೇ ಸಮಾಜದಲ್ಲಿ ಬಹಳಷ್ಟು ಮಂದಿ ದೌರ್ಜನ್ಯಕ್ಕೆ ಒಳಾಗುತ್ತಿದ್ದು, ವಿಶೇಷವಾಗಿ ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ನಾಗರಿಕ ಸಮಾಜ ಕಾಳಜಿ ವಹಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್.ದೇವರಾಜ್ ತಿಳಿಸಿದರು.
ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್‌ನಲ್ಲಿರುವ ಕೆವಿಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಮಕ್ಕಳ ಸುರಕ್ಷತೆ ಕುರಿತು ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಪಾಲಿಸಿ: ಮಹಿಳೆಯರ ಹಕ್ಕುಗಳ ಸಂಕ್ಷರಣೆಗೆ ಸಾಕಷ್ಟು ಕಾನೂನುಗಳನ್ನು ರಚಿಸಲಾಗಿದೆ. ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದ್ದು, ಮಹಿಳೆಯರು ಈ ಬಗ್ಗೆ ಕಾನೂನು ಅರಿವು ಪಡೆಯುವ ಮೂಲಕ ತಮ್ಮ ಮೇಲಿನ ದೌರ್ಜನ್ಯಗಳನ್ನು ಸಂಘಟನಾತ್ಮಕವಾಗಿ ಹಿಮ್ಮಟ್ಟಿಸಬೇಕೆಂದರು. ಸ್ವಸ್ಥ ಸಮಾಜ ನಿರ್ಮಾಣ ಆಗಬೇಕಾದರೆ ಪ್ರತಿಯೊಬ್ಬರು ಕಾನೂನು ಪಾಲಿಸಬೇಕು. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೂಲಕ ಜೀವನ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ದೂರು ಪೆಟ್ಟಿಗೆ ತೆರೆಯಲಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕೆಲಸದ ಸ್ಥಳಗಳಲ್ಲಿ ಸೂಕ್ತ ಭದ್ರತೆ, ಸುರಕ್ಷತೆ ಇಲ್ಲದಿರುವುದರಿಂದ ಮಹಿಳೆಯರು ಅದರಲ್ಲೂ ಹೆಣ್ಣು ಮಕ್ಕಳು ನಾನಾ ರೀತಿಯ ದೌರ್ಜನ್ಯಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಕನಿಷ್ಠ 10 ಮಂದಿ ಮೇಲ್ಟಟ್ಟು ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ದೂರು ಪರಿಹಾರ ಪೆಟ್ಟಿಗೆ ತೆರೆಯಬೇಕು. ಜೊತೆಗೆ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತಾ ಸಮಿತಿಗಳನ್ನು ರಚಿಸಿ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಾನೂನು ಹಾಗೂ ಪರಿವೀಕ್ಷಣಾ ಅಧಿಕಾರಿ ಡಿ.ಕೆ.ರಾಮೇಗೌಡ ಮಾತನಾಡಿ, ಸರ್ಕಾರಗಳು ಹಾಗೂ ವಿಶೇಷವಾಗಿ ನ್ಯಾಯಾಂಗ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಹೆಣ್ಣು ಮಕ್ಕಳು ತಮ್ಮೇ ಮೇಲೆ ಆಗುವ ದೌರ್ಜನ್ಯಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಅಥವಾ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ತಿಳಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಟಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜಿ.ನರಸಿಂಹಯ್ಯ ವಹಿಸಿದ್ದರು. ವೇದಿಕೆಯಲ್ಲಿ ವಕೀಲ ಮಂಜುನಾಥ, ಮಕ್ಕಳ ರಕ್ಷಣಾಧಿಕಾರಿ ಕೆ.ಎನ್.ಮಂಜುನಾಥ, ಶಿಲ್ಪಾ, ಎಂ.ಗಂಗಮ್ಮ, ಆರ್.ಇಂದಿರಾ ಸೇರಿದಂತೆ ಕೆವಿಟಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಹಿಳೆಯರು ಸಮಾಜ ನಿರ್ಮಾಣದಲ್ಲಿ ದೊಡ್ಡ ಪಾತ್ರ ನಿರ್ವವಹಿಸುತ್ತಿದ್ದಾರೆ. ನಾಗರಿಕ ಸಮಾಜ ಮಹಿಳೆಯರನ್ನು ಗೌರವಿಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸಮಾಜ ಸ್ವಸ್ಥಕ್ಕಾಗಿ ಅವರ ಹಕ್ಕುಗಳನ್ನು ಪಡೆಯುವ ರೀತಿಯಲ್ಲಿ ಕರ್ತವ್ಯ ಪಾಲಿಸಬೇಕು.
-ಎಚ್.ದೇವರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರು