ವಿಜಯಪುರ: ದೇಶದಲ್ಲಿ ಕೋವಿಡ್ ಎರಡನೇ ಅಲೆ ಜೋರಾಗಿದೆ. ಜಿಲ್ಲೆಯಲ್ಲಿ ಪರಿಣಾಮ ಜೋರಾಗಿದೆ. ಹೀಗಾಗಿ ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಕೋವಿಡ್ -ಕೋವಿಡ್ ಸೋಂಕಿತರಿಗೆ ಔಷಧ , ಆಕ್ಸಿಜನ್, ವೆಂಟಿಲೇಟರ್, ಹಾಸಿಗೆ, ಚಿಕಿತ್ಸೆ ಹೀಗೆ ಯಾವುದರಲ್ಲೂ ಕೊರತೆ ಉಂಟಾಗಬಾರದು. ಎಂಥದ್ದೇ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ನಿಭಾಯಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಡಿಯೋ ಸಭಾಂಗಣದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯಲ್ಲಿ ಈ ತಾಕೀತು ಮಾಡಿದ ಅವರು, ರೂಪಾಂತರ ಕೊರೊನಾ ವೈರಸ್ ಈ ಬಾರಿ ಯುವ ಜನತೆಯನ್ನೂ ಬಲಿ ಪಡೆಯುತ್ತಿರುವುದು ಆತಂಕದ ಸಂಗತಿ. ಹೀಗಾಗಿ ಜಿಲ್ಲೆಯ ಜನರು ಕೂಡ ಸರ್ಕಾರ ರೂಪಿಸಿರುವ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಪ್ರಮಾಣದ ಆಕ್ಸಿಜನ್, ಹಾಸಿಗೆ ಸೇರಿದಂತೆ ಯಾವುದೇ ಕೊರತೆ ಉಂಟಾಗದಂತೆ ಅಧಿ ಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಎರಡು ಹಾಗೂ ಪ್ರತಿ ತಾಲೂಕಿನಲ್ಲಿ ತಲಾ ಒಂದೊಂದು ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ. ಇದಲ್ಲದೇ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ರೋಗಿಗಳಿಂದ ಪಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಇಂಥ ಪ್ರಕರಣಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಇಲ್ಲಿಯವರೆಗೆ ಜಿಲ್ಲೆಗೆ 2,21,700 ಲಸಿಕಾ ಡೋಸ್ ಪೂರೈಕೆಯಾಗಿದ್ದು, ಇದರಲ್ಲಿ 2,18,020 ಲಸಿಕೆ ಬಳಸಲಾಗಿದೆ. ಲಸಿಕೆ ಕೊರತೆ ಇಲ್ಲಿಯವರೆಗೆ ಉಂಟಾಗಿಲ್ಲ, ಅಗತ್ಯ ಲಸಿಕೆ ದಾಸ್ತಾನು ಮಾಡುವಂತೆಯೂ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಜತೆಗೆ ಲಸಿಕೆ ಪಡೆಯಲು ಸೂಕ್ತ ಪ್ರಚಾರ ನಡೆಸಲು ಸೂಚಿಸಲಾಗಿದೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು-ತಾಂತ್ರಿಕ ಸಿಬ್ಬಂದಿ ಕೊರತೆ ಕಂಡು ಬಂದಲ್ಲಿ ಮೆರಿಟ್ ಆಧಾರದಲ್ಲಿ ಪಾರದರ್ಶಕ ನೇಮಕ ಮಾಡಿಕೊಳ್ಳಬೇಕು. ತಾಲೂಕಾಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯವಿದ್ದರೂ ಕೂಡ ತಾಂತ್ರಿಕ ಸಿಬ್ಬಂದಿ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಐಎಂಎ ಸಂಸ್ಥೆಯಿಂದ ಅಥವಾ ಖಾಸಗಿ ಆಸ್ಪತ್ರೆಗಳ ಮೂಲಕ ವೆಂಟಿಲೇಟರ್‌ಗಳ ನಿರ್ವಹಣಾ ಸಿಬ್ಬಂದಿ ಪೂರೈಸಲು ಸಾಧ್ಯವಿದೆಯೇ ಎಂದು ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೋವಿಡ್ ಒತ್ತಡದಲ್ಲೂ ಜಿಲ್ಲೆಯಲ್ಲಿ ಕುಡಿಯುವ ನೀರು-ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು. ಅಶೋಕ ಅಲ್ಲಾಪೂರ, ಸುಜಾತಾ ಕಳ್ಳಿಮನಿ, ವಿಜುಗೌಡ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಎಸ್ಪಿ ರಾಮ ಅರಸಿದ್ಧಿ, ಡಾ.ಔದ್ರಾಮ್ ಸೇರಿದಂತೆ ಆರೋಗ್ಯ ಇಲಾಖೆ ಅ ಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.