ಹೊಸದಿಲ್ಲಿ : ‘ಎರಡಕ್ಕಿಂತ ಹೆಚ್ಚು ಮಕ್ಕಳಿರುವವರ ಮತದಾನದ ಹಕ್ಕನ್ನು ಸರಕಾರ ಕಿತ್ತುಕೊಳ್ಳಬೇಕು, ಮಾತ್ರವಲ್ಲ ಅಂತಹವರು ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು’ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.
‘ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ಶಾಲೆಗಳನ್ನು, ಆಸ್ಪತ್ರೆಗಳನ್ನು ಬಳಸಲು ಬಿಡಬಾರದು; ಅವರಿಗೆ ಸರಕಾರಿ ಉದ್ಯೋಗಗಳನ್ನು ಕೂಡ ಕೊಡಬಾರದು; ಆಗ ದೇಶದ ಜನಸಂಖ್ಯೆಯು ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆ’ ಎಂದು ಬಾಬಾ ರಾಮ್ ದೇವ್, ಆಲಿಗಢದಲ್ಲಿ ಸಿದ್ಧ ಉಡುಪುಗಳ ಸ್ಟೋರ್ ಪತಂಜಲಿ ಪರಿಧಾನ್ ಉದ್ಘಾಟಿಸಿ ಹೇಳಿದರು.
‘ದೇಶದ ಜನಸಂಖ್ಯೆಯನ್ನು ನಿಯಂತ್ರಿಸುವ ದಿಶೆಯಲ್ಲಿನ ನನ್ನ ಈ ಉಪಾಯಗಳನ್ನು ಜಾತಿ, ಮತ, ಭೇದವಿಲ್ಲದೆ, ಹಿಂದು – ಮುಸ್ಲಿಂ ಎಂಬ ಅಂತರವಿಲ್ಲದೆ ಎಲ್ಲರಿಗೂ ಅನ್ವಯಿಸಬೇಕು; ಆಗ ಮಾತ್ರವೇ ದೇಶದ ಜನಸಂಖ್ಯೆಗೆ ಲಗಾಮು ಬೀಳಲು ಸಾಧ್ಯ’ ಎಂದು ರಾಮ್ ದೇವ್ ಹೇಳಿದರು.
ಕಳೆದ ವರ್ಷ ನವೆಂಬರ್ ನಲ್ಲಿ ಬಾಬ್ ರಾಮ್ ದೇವ್ ಅವರು ಜನಸಂಖ್ಯಾ ನಿಯಂತ್ರಣಕ್ಕೆ ಇದೇ ರೀತಿಯ ಉಪಾಯವನ್ನು ಹೇಳಿದ್ದರಲ್ಲದೆ ‘ನನ್ನಂತಹ ಬ್ರಹ್ಮಚಾರಿಗಳಿಗೆ ವಿಶೇಷ ಸ್ಥಾನಮಾನ ನೀಡಬೇಕು’ ಎಂದು ಸರಕಾರಕ್ಕೆ ಸಲಹೆ ಮಾಡಿದ್ದರು.
‘ಈ ದೇಶದಲ್ಲಿ ನನ್ನಂತೆ ಎಂದೂ ಮದುವೆಯಾಗದ ಜನರಿಗೆ ಸರಕಾರ ವಿಶೇಷ ಸ್ಥಾನಮಾನ, ಗೌರವ ನೀಡಬೇಕು; ಯಾರು ಮದುವೆಯಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೋ ಅವರ ಮತದಾನದ ಹಕ್ಕನ್ನು ರದ್ದು ಮಾಡಬೇಕು; ಅಂತಹವರು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು’ ಎಂದು ಬಾಬಾ ರಾಮ್ ದೇವ್ ಅವರು ಹರಿದ್ವಾರದಲ್ಲಿನ ತಮ್ಮ ಯೋಗ ಪೀಠದಲ್ಲಿ ಹೇಳಿದ್ದರು.