ಹಳೇಬೀಡು: ಸರ್ಕಾರ ಕೋವಿಡ್ ಸೊಂಕು ನಿಯಂತ್ರಣ ಮಾಡುವಲ್ಲಿ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಹೋದರೆ, ಮುಂದೆ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಶಿವರಾಂ ಎಚ್ಚರಿಸಿದರು.
ಪಟ್ಟಣದ ಉಡಸಲಮ್ಮ ದೇವಾಲಯದ ಬಳಿ ಬ್ಲಾಕ್ ಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸೊಂಕು ಹರಡದಂತೆ ಕ್ರಮ ತೆಗೆದುಕೊಳ್ಳ ಬೇಕಿದೆ. ಇಲ್ಲವಾದರೆ, ಭಾರತ ವಿಶ್ವ ಮಟ್ಟದಲ್ಲಿ ಮೊದಲ ಸ್ಥಾನ ಪಡೆದ ದೇಶ ಎಂಬ ಹಣೆಪಟ್ಟಿ ಪಡೆ ಯಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿ ಗ್ರಾಪಂ ಮಟ್ಟದಲ್ಲಿ ಇಬ್ಬರು ಕಾರ್ಯಕರ್ತರನ್ನು ನೇಮಕ ಮಾಡಿಕೊಂಡು ಅವರಿಗೆ 2 ಲಕ್ಷ ರೂ.ಗೆ ಆರೋಗ್ಯವಿಮೆ ಯೋಜನೆ ಮಾಡಿಸಲಾಗುತ್ತದೆ. ಅವರು, ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದು ವಾರಿಯರ್ಸ್ ಆಗಿ ಸೇವೆ ಮಾಡುತ್ತಾರೆ ಎಂದು ತಿಳಿಸಿದರು.
ಜಿಪಂ ಸದಸ್ಯ ಎಚ್.ಎಂ.ಮಂಜಪ್ಪ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ರೈತರು ಬೆಳೆದ ತರಕಾರಿ, ಇನ್ನಿತರ ವಸ್ತುಗಳನ್ನು ಖರೀದಿಸಿ ಉಚಿತವಾಗಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ನೀಡಿದ್ದೇವೆ. ಹಾಗೆಯೇ ಮುಖಂಡರು ತಮ್ಮ ಕೈಲಾದ ಮಟ್ಟಿಗೆ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ವೈದ್ಯ ಡಾ.ಅಭಿದುಲ್ಲಾ ಅವರು, ಆರೋಗ್ಯ ಹಸ್ತ ಕಿಟ್‌ನಲ್ಲಿರುವ ಥರ್ಮಲ್ ಸ್ಕ್ಯಾನರ್ ಆಕ್ಸಿಜನ್ ಪಲ್ಸ್ ಯಂತ್ರ, ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಬಳಕೆ ಬಗ್ಗೆ ಮಾಹಿತಿ ಹಾಗೂ ಆರೋಗ್ಯ ಹಸ್ತ ಶಿಬಿರದ ತರಬೇತಿ ನೀಡಿದರು.
ಮುಖಂಡರಾದ ವೈ.ಎನ್.ಕೃಷ್ಣೇಗೌಡ, ತಾಪಂ ಸದಸ್ಯರಾದ ಅಡಗೂರು ವಿಜಯ್‌ಕುಮಾರ, ಸವಿತಾ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಗೋಣಿಸೊಮನಹಳ್ಳಿ ಗಂಗಾಧರ್, ಗ್ರಾಪಂ ಸದಸ್ಯರಾದ ಬೈರಣ್ಣ, ಮುಖಂಡರಾದ ಚಂದ್ರು, ರಾಜು, ದೊರೆಸ್ವಾಮಿ ಮುಂತಾದವರು ಇದ್ದರು.