ಹೊಸದುರ್ಗ: ಉನ್ನತ ಶಿಕ್ಷಣ ಪಡೆದರೂ ಬದುಕಿನ ವಿಧಾನ ಸುಧಾರಣೆಯಾಗದಿರುವುದು ವಿಷಾದನೀಯ ಸಂಗತಿ ಎಂದು ಕುಂಚಿಟಿಗ ಮಠದ ಡಾ| ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು. ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನದಲ್ಲಿ ಗುರುವಾರ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿವೇಕವುಳ್ಳ ಮನುಷ್ಯ ವಿಚಾರವಂತನಾಗಬೇಕೆ ಹೊರತು, ಟಿವಿ ಮಾಧ್ಯಮಗಳಲ್ಲಿ ಬರುವ ಜ್ಯೋತಿಷಿಗಳ ಮಾತು ನಂಬಿ ಜೀವನ ನಡೆಸಬಾರದು. ಮನುಷ್ಯ ಆದರ್ಶ ಜೀವನ ನಡೆಸದ ಕಾರಣ ಅನಾರೋಗ್ಯ ಮತ್ತು ಕಲ್ಮಶ ಸಮಾಜ ನಿರ್ಮಾಣವಾಗುತ್ತಿದೆ ಎಂದರು.
ಇವತ್ತಿನ ಪೋಷಕ ವರ್ಗದ ನಡವಳಿಕೆಯನ್ನೇ ಮಕ್ಕಳು ಅನುಸರಿಸುವುದರಿಂದ ಎಚ್ಚರಿಕೆಯಿಂದ ನಡೆಯಬೇಕಿದೆ. ಈ ಹಿಂದೆ ಸುಂದರ ಸಂಸಾರ, ಸ್ವಚ್ಛಂದ ಬದುಕು, ಅವಿಭಕ್ತ ಕುಟುಂಬ, ಭಾವೈಕ್ಯ ವಾತಾವರಣ ಇತ್ತು. ಈಗ ಹಣ ಸಂಪಾದನೆ, ದುಡಿಮೆ ಸಮಯ ಹೆಚ್ಚಾಗಿ, ಮಾನವ ಸಂಬಂಧಗಳು ಕಣ್ಮರೆಯಾಗುತ್ತಿವೆ ಎಂದರು.
ಬದಲಾದ ಆಹಾರದ ಕ್ರಮದಿಂದಾಗಿ ಮಾನವನ ದೇಹ ಮತ್ತು ಮನಸ್ಸು ಒಂದಕ್ಕೊಂದು ಸ್ಪಂಸುತ್ತಿಲ್ಲ. ಇದರಿಂದಾಗಿ ಮಾನವ ಅನಾರೋಗ್ಯಕ್ಕೆ ಈಡಾಗುತ್ತಿದ್ದಾನೆ. ತೂಕ ಕಡಿಮೆಯಾಗಲು ವಾಕಿಂಗ್ ಹೊಗುವುದರ ಬದಲಿಗೆ ಮನೆ ಸುತ್ತ ಇರುವ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿ. ಇದು ದೇಶ ಮತ್ತ ದೇಹ ಎರಡಕ್ಕೂ ನೆರವಾಗಲಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ವ್ಯಾಯಾಮ, ಯೋಗಸಾನ ಕಲಿಸುವುದು ವ್ಯಾಪಾರವಾಗಿದೆ ಎಂದರು.
ತಾಪಂ ಸದಸ್ಯೆ ಯಶೋಧಮ್ಮ ಮಾತನಾಡಿ, ನಿಸ್ವಾರ್ಥ ಸೇವೆಯಿಂದಾಗಿ ರೈತ ಮತ್ತು ಸೈನಿಕ ದೇಶಕ್ಕೆ ಮಾದರಿ. ಪ್ರತಿಯೊಬ್ಬರು ತಾನು ಮಾಡುವ ಕಾಯಕದಲ್ಲಿಯೇ ದೇಶಕ್ಕೆ ಸೇವೆ ಸಲ್ಲಿಸುವ ಗುಣ ಹೊಂದಿರಬೇಕು. ಮನುಷ್ಯನ ಒಳ ಮನಸ್ಸನ್ನು ಜಾಗೃತಗೊಳಿಸುವಂತಹ ಕೆಲಸವು ಸುಜ್ಞಾನ ಸಂಗಮ ಕಾರ್ಯಕ್ರಮದ ಮೂಲಕ ನಡೆಯುತ್ತಿದೆ. ಶಾಂತವೀರ ಸ್ವಾಮೀಜಿ ಕೇವಲ ಪೂಜೆ, ಆಶೀರ್ವಚನ ನೀಡಲಿಲ್ಲ. ರೈತನಾಗಿ ಶ್ರಮದಿಂದ ಮಠ ಕಟ್ಟದರು. ಇಂತಹ ಶ್ರೀಗಳ ನಡೆಯು ನಮಗೆಲ್ಲಾ ಆದರ್ಶ ಎಂದರು.
ಈ ವೇಳೆ ಹೊಳಲ್ಕೆರೆ ತಾಲೂಕು ರಂಗಾಪುರ ಖುಷಿ ಸಂಸ್ಕೃತಿ ವಿದ್ಯಾಕೇಂದ್ರದ ಡಾ|ತಿಪ್ಪಾರೆಡ್ಡಿ ಗುರೂಜಿ ರೋಗ ಮುಕ್ತ ಜೀವನಕ್ಕೆ ಯೋಗ ರಹದಾರಿ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿದರು.
ತಣಿಗೆಕಲ್ಲು, ಹೊಸಕೆರೆ, ಹೊನ್ನೆಕೆರೆ ಗ್ರಾಮದ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಸಿ.ಎಸ್. ತಿಪ್ಪೇಸ್ವಾಮಿ, ಎಚ್.ಆರ್. ತಿಮ್ಮಪ್ಪ, ಎಂ. ಶಿವಲಿಂಗಪ್ಪ ಹಾಗೂ ಬ್ಯಾಂಕ್ ನೌಕರ ನಾಗರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯೆ ಚೇತನಾ ಪ್ರಸಾದ್, ವೀರಶೈವ ಮಹಾಸಭಾ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ಜಿಪಂ ಮಾಜಿ ಸದಸ್ಯ ದೊಡ್ಡಘಟ್ಟ ದ್ಯಾಮಪ್ಪ, ಶಿಕ್ಷಕ ಜಗದೀಶ್ ಮತ್ತಿತರರು ಇದ್ದರು.