ಗುಂಡ್ಲುಪೇಟೆ: ಗ್ರಾಮಗಳ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳುವ ವಿನೂತನ ಪ್ರಯತ್ನ ಮಾಡುವುದಕ್ಕಾಗಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ತಾಲೂಕಿನ ಬರಗಿ ಗ್ರಾಮದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಈ ಭಾಗದ ಜನರ ಕಷ್ಟ ಸುಖಗಳನ್ನು ತಿಳಿದು ಕೊಳ್ಳಲು ಮತ್ತು ಮೂಲಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಯಾವ ಹೆಜ್ಜೆ ಇಡಬೇಕು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿನ ಕುಡಿಯುವ ನೀರು, ರಸ್ತೆ ಸೌಕರ್ಯ ಸೇರಿದಂತೆ ಹತ್ತು ಹಲವು ಉದ್ದೇಶಗಳನ್ನು ಒಳಗೊಂಡ ಯೋಜನೆಗಳನ್ನು ತಯಾರಿಸಿದ್ದು, ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ಈ ನಿಟ್ಟಿ ಮತ್ತಷ್ಟು ಸೌಲಭ್ಯವಂಚಿತ ಗ್ರಾಮಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಅಭಿವೃದ್ಧಿ ಪಡಿಸಲು ಅನುಕೂಲವಾಗುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಬೇಗೂರು ಗ್ರಾಮದಲ್ಲಿ ಜನ ಸಂಪರ್ಕಸಭೆಯನ್ನು ನಡೆಸಿದ್ದು, ಸಂಪೂರ್ಣವಾಗಿ ಯಶಸ್ವಿಯಾಗಿದೆ. ಇದೇ ರೀತಿಯಾಗಿ ಬರಗಿ ಗ್ರಾಮದಲ್ಲಿ ನಡೆಸುವುದರೊಂದಿಗೆ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಾಗುವುದು ಎಂದರು.
ದೂರುಗಳ ಸುರಿಮಳೆ: ಜನ ಸಂಪರ್ಕ ಸಭೆಯಲ್ಲಿ ದೂರುಗಳ ಸುರಿಮಳೆಯೇ ಸುರಿಯಿತು. ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಎಂಬಿತ್ಯಾದಿ ದೂರುಗಳನ್ನು ಗ್ರಾಮಸ್ಥರು ಶಾಸಕರ ನೇತೃತ್ವದಲ್ಲಿ ತಹಶೀಲ್ದಾರ್ ನಂಜುಂಡಯ್ಯ ಅವರಿಗೆ ಸಲ್ಲಿಸಿದರು.
ಇದರೊಂದಿಗೆ ಅರಣ್ಯ ಸಮೀಪದಲ್ಲಿರುವ ಸಾಗುವಳಿ ಭೂಮಿಗಳಿಗೆ ಸಾಗುವಳಿ ಪತ್ರವನ್ನು ನೀಡಬೇಕು. ಕಾಡಂಚಿನ ರೈತರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಪಹಣಿ ಪತ್ರವಿದ್ದರೂ ಒತ್ತುವರಿ ಎಂದು ತೊಂದರೆ ಕೊಡುತ್ತಿದ್ದಾರೆ ಇದು ನಿಲ್ಲಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಸಮೀಪದ ಮಡಹಳ್ಳಿ ಗ್ರಾಮವನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರ್ಪಡೆ ಮಾಡಿ ಕುಡಿವ ನೀರಿನ ಸರಬರಾಜು ಮಾಡಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಲಾಯಿತು.
ದೂರುಗಳನ್ನು ಆಲಿಸಿದ ಶಾಸಕರು ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಜೆಪಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಜಿಪಂ ಸದಸ್ಯ ಚನ್ನಪ್ಪ, ತಾಪಂ ಸದಸ್ಯೆ ಕಲಾವತಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.