Advertisement

ರಾಜನಿಂದ ಲಾಭ

12:45 PM May 07, 2018 | |

ದೇಸೀ ತಳಿಯಾದ ಗಿರಿರಾಜ ಕೋಳಿಯನ್ನು ಸಾಕುವುದರಿಂದ ಹೆಚ್ಚು ಲಾಭವಿದೆ. ಒಂದು ಕೋಳಿಯಿಂದ, ಒಂದು ವರ್ಷದಲ್ಲಿ 150 ಮೊಟ್ಟೆಗಳು ಸಿಗುತ್ತವೆ. ನೂರು ಕೋಳಿಗಳನ್ನು ಸಾಕಿದರೆ ಮೊಟ್ಟೆ ಮಾರಾಟದಿಂದಲೇ ಲಕ್ಷ ರುಪಾಯಿ ಸಂಪಾದಿಸಬಹುದು. 

Advertisement

ಸಮಾಜ ಸೇವೆಗಾಗಿ ಬದುಕನ್ನು ಮೀಸಲಿಟ್ಟವರು ಈ ಸುಕನ್ಯ ಹರಿದಾಸರು. ಬೆಳ್ತಂಗಡಿ ತಾಲೂಕಿನ ಕಾಪಿನಡ್ಕದ ಬಳಿ ಇವರದು ತೋಟದ ಮನೆ ಇದೆ. ಅಡಿಕೆ, ತೆಂಗು, ಭತ್ತ, ರಬ್ಬರ್‌ ಬೆಳೆ ಇಡೀ ತೋಟವನ್ನು ಆವರಿಸಿದೆ. ಇಷ್ಟೇ ಅಲ್ಲ, ಈಗ ಗಿರಿರಾಜ ಕೋಳಿಗಳ ಸಾಕಾಣಿಕೆಗೂ ಕೈ ಹಾಕಿದ್ದಾರೆ. ಸೈ ಎನಿಸಿಕೊಂಡಿದ್ದಾರೆ. 

ಬಾಯ್ಲರ್‌ ಕೋಳಿಗಳನ್ನು ಸಾಕುವವರನ್ನು ನೋಡಿದ ಬಳಿಕ ನಮ್ಮ ದೇಸೀ ತಳಿಗಳಿಂದ ಅದಕ್ಕಿಂತಲೂ ಹೆಚ್ಚಿನ ಲಾಭ ಇದೆಯೆಂದು ತೋರಿಸುವ ಉದ್ದೇಶದಿಂದ ಗಿರಿರಾಜ ಕೋಳಿ ಸಾಕಾಣಿಕೆಯಲ್ಲಿ  ಯಶಸ್ಸಿನ ಮೆಟ್ಟಲೇರಿ ಲಾಭದ ಮುಗುಳ್ನಗೆ ಸೂಸಿದ್ದಾರೆ.

ಇದು ನಮ್ಮ ದೇಸೀ ತಳಿ. ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿಜಾnನಿಗಳು ರೈತರ ಅನುಕೂಲಕ್ಕಾಗಿಯೇ ಅಭಿವೃದ್ಧಿಪಡಿಸಿದ ಗಿರಿರಾಜ ಕೋಳಿ. ಎಲ್ಲ ರೈತರಿಗೂ, ಸಾಕಲು ಅತ್ಯಂತ ಸೂಕ್ತವಾಗಿದೆ ಎನ್ನುತ್ತಾರೆ ಅವರು. ಕೋಳಿಗಳಿಗಾಗಿ ಅತಿ ಕಡಿಮೆ ಖರ್ಚಿನಲ್ಲಿ ಮಾದರಿ ಗೂಡು ನಿರ್ಮಿಸಿದ್ದಾರೆ. ಇದಕ್ಕೆ ಕಬ್ಬಿಣದ ಬಲೆ, ಸಪೂರಾದ ಗಟ್ಟಿ ಸರಳುಗಳನ್ನಷ್ಟೇ ಬಳಸಿರುವುದರಿಂದ ಹೆಚ್ಚಿನ ಖರ್ಚು ಆಗಿಲ್ಲ.

ಇಂಥ ಗೂಡುಗಳಿಂದ ಹೊರಗಿನ ಅಪಾಯ ಕಡಿಮೆ. ಸಾಕಷ್ಟು ಗಾಳಿ, ಬೆಳಕು ಸಿಗುತ್ತದೆಂಬ ಅನುಕೂಲಗಳನ್ನೂ ವಿವರಿಸುತ್ತಾರೆ. ತಲಾ ನೂರು ರೂ. ನೀಡಿ ನೂರು ಗಿರಿರಾಜ ಕೋಳಿ ಮರಿ ತಂದಿದ್ದಾರೆ. 400 ರೂ. ಬೆಲೆಗೆ ಹತ್ತು ಸ್ಥಳೀಯ ತಳಿಗೆ ಸೇರಿದ ಕೋಳಿಗಳನ್ನೂ ತಂದು ಸಾಕುತ್ತಿದ್ದಾರೆ. ಗಿರಿರಾಜ ಕೋಳಿಗಳು ಮನುಷ್ಯನಿಗೆ ಹೆಚ್ಚು ಹೊಂದಿಕೊಂಡು ಬದುಕುತ್ತವೆ. ಅವು ಕರೆದಾಗ ಬಳಿಗೆ ಬರುತ್ತವೆಯಂತೆ.

Advertisement

ಸುಕನ್ಯಾ ಅವರ ಅನುಭವದ ಪ್ರಕಾರ, ಗಿರಿರಾಜ ಕೋಳಿ ಸಾಕಣೆಗೆ ಹೆಚ್ಚಿನ ಕಾಳಜಿ ಅನಗತ್ಯ. ಗೂಡಿನಿಂದ ಹೊರಗೆ ಆಹಾರ ಸಂಗ್ರಹಕ್ಕೆ ಬಿಡಬಹುದು. ಕೆಲವು ಗಿಡಗಳ ಚಿಗುರುಗಳನ್ನು, ಕ್ರಿಮಿಕೀಟಗಳನ್ನು ಈ ಕೋಳಿ ಹುಡುಕಿ ತಿನ್ನುತ್ತದೆ. ತರಕಾರಿ ಬೆಳೆದವರಿಗೆ ಕೀಟನಾಶಕದ ಅಗತ್ಯವಿಲ್ಲದೆ ಗಿಡಗಳನ್ನು ಕೀಟಗಳಿಂದ ರಕ್ಷಿಸಲು ಗಿರಿರಾಜ ಕೋಳಿ ಬಲು ಸಹಕಾರಿಯಂತೆ.

ಇನ್ನು ಹಾರುವ ಮತ್ತು ಓಡುವ ಶಕ್ತಿ ಯಾವುದೇ ತಳಿಗಿಂತ ಅಧಿಕರುವ ಕಾರಣ ಅಪಾಯ ಬಂದಾಗ ತಪ್ಪಿಸಿಕೊಳ್ಳುವ ಸಾಮರ್ಥ್ಯ ಇದಕ್ಕೆ ಹೆಚ್ಚಾಗಿದೆ. ಗಿರಿರಾಜ ಕೋಳಿಗಾಗಿ ಅದರ ಸಮತೋಲಿತ ಆಹಾರವನ್ನೇ ಹಣ ಕೊಟ್ಟು ತರಬೇಕಾಗಿಲ್ಲ. ಅಕ್ಕಿ, ಗೋಧಿ ಇತ್ಯಾದಿಗಳ ನುಚ್ಚು, ಅನ್ನದಂಥ ಉಳಿಕೆ ಆಹಾರ ಪದಾರ್ಥಗಳನ್ನೂ ಕೊಡಬಹುದು.

ಹೈಡ್ರೋಪೋನಿಕ್ಸ್‌ ವಿಧಾನದ ಮೇವು ನೀಡಿದರೆ ಬೇಗನೆ ಬೆಳೆಯುತ್ತದೆ ಎನ್ನುವ ಸುಕನ್ಯಾ, ಒಂದು ಕೋಳಿಗೆ ನೂರು ಗ್ರಾಮ್‌ ಪ್ರಮಾಣದಲ್ಲಿ ಕೋಳಿ ಆಹಾರ ನೀಡಬಹುದು ಎನ್ನುತ್ತಾರೆ. ಜನಿಸಿದ ದಿನವೇ 45 ಗ್ರಾಮ್‌ ತೂಕವಿರುವ ಮರಿ, ಬಲಿತ ಎರಡೇ ತಿಂಗಳಲ್ಲಿ ಮತ್ತೆ ಮೊಟ್ಟೆ ಇಡುತ್ತದೆ. ವರ್ಷದಲ್ಲಿ 135-150 ಮೊಟ್ಟೆ ಸಿಗುತ್ತದೆ. ಇದರ ಮೊಟ್ಟೆಗೆ ಅದರದೇ ಆದ ವೈಶಿಷ್ಟ್ಯವಿದೆ.

ಫಾರಂ ಕೋಳಿ ಮೊಟ್ಟೆಗಿಂತ ಹೆಚ್ಚು ತೂಕ. ಅಂದರೆ 55 ಗ್ರಾಮ್‌ ವರೆಗೂ ತೂಗುತ್ತದೆ. ಚಿಪ್ಪು ಕಂದು ಬಣ್ಣವಾಗಿದ್ದು ಬಹು ದೃಢವಾಗಿರುವುದರಿಂದ ಸಾಗಿಸುವಾಗ ಫ‌ಕ್ಕನೆ ಒಡೆಯುವುದಿಲ್ಲ. ಹೆಚ್ಚು ದಿನಗಳವರೆಗೆ ಮೊಟ್ಟೆಗಳು ಉಳಿಯುತ್ತವೆ. ನೂರಕ್ಕೆ ಶೇ. 85ರಷ್ಟು ಮೊಟ್ಟೆಗಳು ಮರಿಯಾಗುವ ಅವಕಾಶವಿದೆ. ಇದು ಇತರ ತಳಿಗಳಿಗಿಂತ ಹೆಚ್ಚೇ ಎಂಬುದು ಸುಕನ್ಯಾ ಅವರು ಕೊಡುವ ವಿವರಣೆ.

ಸರಿಯಾಗಿ ಪೋಷಿಸಿದರೆ ಗಿರಿರಾಜ ಕೋಳಿ 15 ವಾರಗಳಲ್ಲಿ ಐದು ಕಿ.ಲೋ ತೂಗುತ್ತದೆ. ಕಿ.ಲೋಗೆ 200 ರೂ. ದರ ಅಂತಿಟ್ಟುಕೊಂಡರೂ ಒಂದು ಕೋಳಿಯಿಂದ ಸಾವಿರ ರೂಪಾಯಿ ಆದಾಯ ಸಿಗುತ್ತದೆ. ಇದರ ಮಾಂಸ ತುಂಬ ಸ್ವಾದಿಷ್ಟವಾದುದು. ಇದಕ್ಕೆ ಬೋಂಡಾ ಚಿಕನ್‌ ಎಂಬ ವಿಶೇಷ ಹೆಸರೂ ಇದೆ.

ಕರಿದು ತಯಾರಿಸುವ ಬೋಂಡಾಕ್ಕೆ ಅದು ಅತ್ಯಂತ ಸೂಕ್ತವೆಂಬ ಕಾರಣಕ್ಕೆ ಬೇಡಿಕೆಯೂ ಹೆಚ್ಚು. ಮೊಟ್ಟೆಗೂ ಕನಿಷ್ಠ ಐದು ರೂಪಾಯಿ ಸಿಗುವ ಕಾರಣ ಒಂದು ಕೋಳಿಯಿಂದ ವರ್ಷಕ್ಕೆ 750 ರೂಪಾಯಿ ಬರುತ್ತದೆಂದು ಲೆಕ್ಕಾಚಾರ ಹೇಳುತ್ತಾರೆ. ನೂರು ಕೋಳಿಗಳನ್ನು ಕ್ರಮಬದ್ಧವಾಗಿ ಸಾಕಿ, ಮಾಂಸಕ್ಕಾಗಿ ಮಾರಾಟ ಮಾಡಿದರೆ ಮೂರೇ ತಿಂಗಳಲ್ಲಿ ಎಂಭತ್ತು ಸಾವಿರ ಗಳಿಸಬಹುದು. ಇದರಲ್ಲಿ ಐವತ್ತು ಸಾವಿರ ನಿವ್ವಳ ಲಾಭವೆಂದೇ ಪರಿಗಣಿಸಬಹುದು ಎನ್ನುತ್ತಾರೆ ಸುಕನ್ಯಾ. 

ಮಾಹಿತಿಗೆ: 9449025674

* ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next