Advertisement

ಆರೋಗ್ಯ ಮೇಳ ಲಾಭ ಪಡೆಯಿರಿ

12:49 PM Apr 23, 2022 | Team Udayavani |

ಅಫಜಲಪುರ: ರಾಜ್ಯ ಸರ್ಕಾರ ಬಡವರು, ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆಯೋಜನೆ ಮಾಡುತ್ತಿರುವ ಆರೋಗ್ಯ ಮೇಳದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

Advertisement

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ಉತ್ತಮ ರೀತಿಯ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಆರೋಗ್ಯ ಇಲಾಖೆಗೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಬೇಕು ಎಂದರು.

ಆರೋಗ್ಯ ಇಲಾಖೆ ನಿಂತ ನೀರಾಗಬಾರದು, ಚಲನಶೀಲ ವಾಗಿರಬೇಕು. ಸರ್ಕಾರದಿಂದ ಬರುವ ಆರೋಗ್ಯ ಸೇವೆಗಳನ್ನು ಬಡ ಜನರಿಗೆ ತಲುಪಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ವೈದ್ಯರು, ಆರೋಗ್ಯ ಇಲಾಖೆಯವರು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕೆಂದು ತಾಕೀತು ಮಾಡಿದರು.

ತಾಲೂಕು ಆಸ್ಪತ್ರೆಯಲ್ಲಿನ ಡಯಾಲಿಸಿಸ್‌ ಯಂತ್ರ ಕೆಟ್ಟು ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಡಯಾಲಿಸಿಸ್‌ ಯಂತ್ರ ದುರಸ್ತಿ ಮಾಡುವಂತೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಸಂಜೀವಕುಮಾರ ದಾಸರ್‌ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ಆರೋಗ್ಯ ಮೇಳ ಆಯೋಜಿಸಲಾಗಿದೆ. ಜನಸಾಮಾನ್ಯರು ಇಂತಹ ಮೇಳಗಳ ಸದುಪಯೋಗ ಪಡೆದುಕೊಂಡು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

Advertisement

ಡಿಎಚ್‌ಒ ಡಾ| ಶರಣಬಸಪ್ಪ ಗಣಜಲಖೇಡ ಮಾತನಾಡಿ, ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ. ಸಾರ್ವಜನಿಕರು ಆರೋಗ್ಯ ಇಲಾಖೆ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ಮುಖ್ಯವಾಗಿ ಆಯುಷ್ಮಾನ್‌ ಕಾರ್ಡ್‌ ಲಾಭ ಪಡೆದುಕೊಳ್ಳಬೇಕು. ಆರೋಗ್ಯ ಸಮಸ್ಯೆ ಇದ್ದಾಗ ದೊಡ್ಡ ಆಸ್ಪತ್ರೆಗಳಿಗೆ ಹೋದರೆ ಈ ಕಾರ್ಡ್‍ನಿಂದ ಬಹಳಷ್ಟು ಅನುಕೂಲವಾಗಲಿದೆ. “ಇ ಸಂಜೀವಿನಿ’ ಒಪಿಡಿಗೂ ಉಪಯೋಗವಾಗಲಿದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ, ಡಾ| ರತ್ನಾಕರ ತೋರಣ, ಡಾ| ಅಭಯಕುಮಾರ, ಡಾ| ಚೇತನ, ಡಾ| ರಾಜಕುಮಾರ, ಡಾ| ರತ್ನಶೀಲ, ಡಾ| ಶಿವಕುಮಾರ, ಡಾ| ಪ್ರಸನ್ನ ಕಟ್ಟಿ, ಡಾ| ಇರ್ಫಾನ್‌, ಡಾ| ಎಚ್‌. ಎಸ್‌ ದೇಶಮುಖ, ಡಾ| ಗಿರಿಜಾ, ಡಾ| ಚಂದ್ರಕಾಂತ, ಡಾ| ಶಾಂತಕುಮಾರ, ಸಿಡಿಪಿಒ ಮೀನಾಕ್ಷಮ್ಮ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next