Advertisement

ಬದಲಾದ ರಾಜಕೀಯದ ಲಾಭ ಪಡೆಯಿರಿ 

12:57 AM Feb 23, 2019 | Team Udayavani |

ಬೆಂಗಳೂರು: ಮೂರು ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ರಾಷ್ಟ್ರಪರಿಸ್ಥಿತಿಗೆ ಹೋಲಿಸಿದರೆ ಸದ್ಯ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಾಗಿದ್ದು, ಎಲ್ಲರೂ ಶ್ರಮ ವಹಿಸಿ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಮತದಾರರನ್ನು ಸೆಳೆಯುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವತ್ತ ಗಮನ ಹರಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ. ಯಲಹಂಕದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಮಿತ್‌ ಶಾ, ರಾಜ್ಯ ನಾಯಕರಿಗೆ ಕೆಲ ನಿರ್ದೇಶನ ನೀಡಿದ್ದಾರೆ.

Advertisement

ಮುಖ್ಯವಾಗಿ ಕಳೆದ ಡಿಸೆಂಬರ್‌ನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬಿಎಸ್‌ಪಿಯ ಮಾಯಾವತಿ, ಎಸ್‌ಪಿಯ ಅಖೀಲೇಶ್‌ ಯಾದವ್‌ ಅವರು ಕಾಂಗ್ರೆಸ್‌ನಿಂದ ದೂರ ಉಳಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುವ ಚಿಂತನೆಯಲ್ಲಿದ್ದಂತಿದೆ. ಇತ್ತ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವೇ ಚಂದ್ರಬಾಬು ನಾಯ್ಡು ಅವರಿಂದ ಅಂತರ ಕಾಯ್ದುಕೊಂಡಿದೆ. ಹಾಗಾಗಿ, ಮಹಾಘಟ ಬಂಧನದಲ್ಲಿ ಒಂದುಗೂಡಲೆತ್ನಿಸಿದ ಪಕ್ಷಗಳಲ್ಲೇ ಒಮ್ಮತವಿದ್ದಂತಿಲ್ಲ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚು ಸ್ಥಾನ ಗಳಿಸಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಮಟ್ಟದಲ್ಲಿ ನಾಯಕತ್ವದ ವಿಚಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಹೊರತುಪಡಿಸಿದರೆ ಬೇರೆ ಯಾವುದೇ ಪ್ರಭಾವಿ ನಾಯಕರಿಲ್ಲ. ಹಾಗಾಗಿ, ಹಿಂದಿನ ಪರಿಸ್ಥಿತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆ, ಬಲವರ್ಧನೆಗೆ ಒತ್ತು ನೀಡಬೇಕು. ಸಂಘಟನೆ ಆಧಾರಿತ ಪಕ್ಷದಲ್ಲಿ ಕಾರ್ಯಕರ್ತರು ಸೇರಿ ಎಲ್ಲ ಶ್ರೇಣಿಯವರು ಒಟ್ಟಿಗೆ ಕಾರ್ಯ ನಿರ್ವಹಿಸಿ ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸಬೇಕೆಂದು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಜವಾಬ್ದಾರಿ ಹಂಚಿಕೆ: ಲೋಕಸಭಾ ಚುನಾವಣಾ ಸಮಿತಿಗಳು ವಾರದಲ್ಲಿ ಒಮ್ಮೆ ಸಭೆ ಸೇರಬೇಕು. ಕೇಂದ್ರ ಬಿಜೆಪಿ ನೀಡಿರುವ ಕಾರ್ಯಕ್ರಮಗಳ ಅನುಷ್ಠಾನ, ಸ್ಥಿತಿಗತಿ ಪರಿಶೀಲಿಸಿ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯಗತ ವಾಗುವಂತೆ ಮೇಲ್ವಿಚಾರಣೆ ನಡೆಸಬೇಕು.ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯ ದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀ ಧರರಾವ್‌ ಅವರು ಪಾಲ್ಗೊಳ್ಳುವ ರೀತಿಯಲ್ಲಿ ವಾರಕ್ಕೊಂದು ಸಭೆ ಆಯೋಜಿಸಿ ಸಮನ್ವಯತೆ ಸಾಧಿಸುವ ಜವಾಬ್ದಾರಿಯನ್ನು ಅಮಿತ್‌ ಶಾ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ವಹಿಸಿದ್ದಾರೆ.

ಪ್ರತಿ ಐದು ಮತಗಟ್ಟೆಗೆ ಒಬ್ಬರು ಶಕ್ತಿ ಕೇಂದ್ರ ಪ್ರಮುಖರಂತೆ ರಾಜ್ಯದಲ್ಲಿ 11,600 ಶಕ್ತಿ ಕೇಂದ್ರ ಪ್ರಮುಖರಿದ್ದು, ಅವರು ನಿರಂತರವಾಗಿ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಪ್ರಚಾರ, ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ಸಕ್ರಿಯರಾಗಬೇಕು. ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಅನುಕೂಲ ವಾಗುವಂತೆ 11,600 ಶಕ್ತಿ ಕೇಂದ್ರದ ಪ್ರಮುಖ ರೊಂದಿಗೆ ಸಂಪರ್ಕದಲ್ಲಿದ್ದು, ಕಾರ್ಯ ನಿರ್ವಹಿಸಲು 1000 ಮಂದಿಯನ್ನು ಗುರುತಿಸಬೇಕು. ಬಿಜೆಪಿಗಾಗಿ ಸ್ವಯಂಪ್ರೇರಣೆಯಿಂದ ಕಾರ್ಯ ನಿರ್ವಹಿಸಲು ಆಸಕ್ತರಾಗಿರುವವರನ್ನು ಗುರುತಿಸಿ, ರಾಜ್ಯದ ನಾಲ್ಕೂ ದಿಕ್ಕಿನಲ್ಲಿ ಅವರಿಗೆ ಕಾರ್ಯಾಗಾರ ನಡೆಸಿ, ಮಾಹಿತಿ ನೀಡಬೇಕು ಎಂದು ಸೂಚಿಸಿರುವ ಅಮಿತ್‌ ಶಾ, ಇದರ ಮೇಲ್ವಿಚಾರಣೆಯ ಹೊಣೆಗಾರಿಕೆ ಹಾಗೂ ಸಮನ್ವಯದ ಹೊಣೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರಿಗೆ ವಹಿಸಿದ್ದಾರೆ.

Advertisement

ಉಸ್ತುವಾರಿಗಳಿಗೆ ಮಾರ್ಗದರ್ಶನ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಶಕ್ತಿ ಕೇಂದ್ರದ ಪ್ರಮುಖರು, ಪ್ರಭಾರಿಗಳು, ಸಂಚಾಲಕರು, ವಿಸ್ತಾರಕರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ವಿಭಾಗ ಸಂಘಟನಾ ಕಾರ್ಯದರ್ಶಿಗಳು, ಕ್ಲಸ್ಟರ್‌ಗಳ ಉಸ್ತುವಾರಿಗಳಿಗೆ ಮಾರ್ಗದರ್ಶನ ನೀಡಿರುವ ಅಮಿತ್‌ ಶಾ ಅವರು, ಇನ್ನೊಂದೆಡೆ ರಾಜ್ಯ ಬಿಜೆಪಿ ಸಂಸದರು, ಶಾಸಕರು ಹಾಗೂ ಕೋರ್‌ ಕಮಿಟಿ ಸದಸ್ಯರಿಗೂ ಸಲಹೆ, ಸೂಚನೆ ನೀಡಿ ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಿರುವಂತೆ ಹುರಿದುಂಬಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next