Advertisement

ಸ್ನಾತಕೋತ್ತರ ಕೇಂದ್ರದ ಲಾಭ ಪಡೆಯಿರಿ

02:47 PM Mar 22, 2018 | Team Udayavani |

ಆಳಂದ: ಹಿಂದುಳಿದ ಆಳಂದ ಗಡಿಭಾಗದಲ್ಲಿ ಗುಲಬರ್ಗಾ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರ ತೆರೆಯುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನಾಂದಿಯಾಗಿದೆ. ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದು ಗುಲಬರ್ಗಾ ವಿಶ್ವ ವಿದ್ಯಾಲಯ ಪ್ರಭಾರ ಕುಲಪತಿ ಡಾ| ದೇವಿದಾಸ ಮಾಲೆ ಕರೆ ನೀಡಿದರು.

Advertisement

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಗುಲಬರ್ಗಾ ವಿಶ್ವ ವಿದ್ಯಾಲಯ, ಕಲಬುರಗಿ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ನಾತಕೋತ್ತರ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಜ್ಞಾನ ಆಯೋಗದ ಶಿಫಾರಸಿನಂತೆ ಪ್ರತಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಹಾಗೂ ತಾಲೂಕಿಗೊಂದು ಸ್ನಾತಕೋತ್ತರ ಕೇಂದ್ರದ ಬಯಕೆಯಂತೆ, ಸುದೈವಕ್ಕೆ ಶಾಸಕ ಬಿ.ಆರ್‌. ಪಾಟೀಲ ಅವರ ಕೋರಿಕೆಯಂತೆ ಸ್ನಾತಕೋತ್ತರ ಕೇಂದ್ರ ಪ್ರಾರಂಭಗೊಂಡಿದೆ ಎಂದರು.
 
ವಿವಿ ವ್ಯಾಪ್ತಿಯಲ್ಲಿ 560 ಕಾಲೇಜು ಪೈಕಿ ಬೀದರ್‌ 132, ಕಲಬುರಗಿ, ಯಾದಗಿರಿ 306, ರಾಯಚೂರು 122 ಪದವಿ ಕಾಲೇಜುಗಳು ನಡೆಯುತ್ತಿವೆ. ಅಲ್ಲದೆ, ಡಾ| ಬಿ.ಆರ್‌. ಅಂಬೇಡ್ಕರ್‌, ನಿಜಶರಣ ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ ಹೀಗೆ 32 ಅಧ್ಯಯನ ಪೀಠಗಳಿದ್ದು, ವಿವಿ ಕೇಂದ್ರ ವ್ಯಾಪ್ತಿಗೆ ಈಗ ಹೊಸದಾಗಿ ಆಳಂದ ಸೇರ್ಪಡೆಯಾಗಿ ಐತಿಹಾಸಿಕ ಕೆಲಸವಾಗಿದೆ. ಇಲ್ಲಿ ಪ್ರಾರಂಭಿಸಿದ ಸ್ನಾತಕೋತ್ತರ ಕೇಂದ್ರಗಳಲ್ಲಿ ಸ್ಪರ್ಧಾತ್ಮಕವಾಗಿ ಹೊಸ ಕೋರ್ಸ್‌ಗಳು ಸೇರಿ ವೃತಿ ಕೌಶಲ್ಯ ತರಬೇತಿ ಪ್ರಾರಂಭಿಸುವುದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಗಡಿಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವ ಮಹತ್ವದ ಗುರಿ, ಉದ್ದೇಶ ಹೊಂದಿದ್ದು, ತಾಲೂಕಿನ ಜನರಿಗೆ ಆರ್ಥಿಕವಾಗಿ ಯಾವುದೇ ಸಾಧನವಿಲ್ಲ. ಶಿಕ್ಷಣ ಬಿಟ್ಟರೆ ಬೇರೆ ದಾರಿಯೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಮತ್ತು ವಿವಿ ಕುಲಪತಿಗಳ ಮನವೊಲಿಸಿದಾಗ ಸ್ನಾತಕೋತ್ತರ ಕೇಂದ್ರ ಮಂಜೂರಾಗಿದೆ ಎಂದರು.
 
ಇಂಗ್ಲಿಷ್‌, ಎಂಸಿ, ಎಂಕಾಂ, ಗಣಿತ ವಿಷಯಗಳ ಸ್ನಾತಕೋತರ ತರಬೇತಿ ಪ್ರಾರಂಭಿಸಬೇಕು. ಅಗತ್ಯ ಬಿದ್ದಲ್ಲಿ ಮರಾಠಿ ಮತ್ತು ಉರ್ದು ವಿಭಾಗವನ್ನು ಪ್ರಾರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಬೇಕು ಎಂದು ಶಾಸಕರು ಕುಲಪತಿಗಳಿಗೆ ಮನವಿ ಮಾಡಿದರು. ಗುಲಬರ್ಗಾ ವಿಶ್ವ ವಿದ್ಯಾಲಯ ಕುಲಸಚಿವ ಪ್ರೊ| ದಯಾನಂದ ಅಗಸರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಲಾ ನಿಕಾಯದ ಪರಿಮಳಾ ಅಂಬೇಕರ್‌, ವಿತ್ತಾಧಿ ಕಾರಿ ಪ್ರೊ| ರಾಜನಾಳ್ಕರ್‌ ಲಕ್ಷ್ಮಣ, ಮೌಲ್ಯಮಾಪನ ಕುಲಸಚಿವ ಪ್ರೊ| ಡಿ.ಎಂ. ಮದರಿ, ಪುರಸಭೆ ಉಪಾಧ್ಯಕ್ಷ ಅಜಗರ ಅಲಿ ಹವಾಲ್ದಾರ, ವಾರ್ಡ್‌ ಸದಸ್ಯ ರಾಮ ಹತ್ತರಕಿ, ಡಿಗ್ರಿ ಕಾಲೇಜು ಪ್ರಾಚಾರ್ಯರಾದ ಡಾ| ಕಾಶಿನಾಥ ಬಿರಾದಾರ, ಡಾ| ಎಸ್‌.ಎಸ್‌. ಪಾಟೀಲ, ಓಂ ಪ್ರಕಾಶ ರಾಜೋಳ, ಸೇಡಂನ ಎಸ್‌. ಎಸ್‌. ದಾಭಾ, ಅಧಿಕಾರಿ ಡಾ| ಸಂಜಯ ರೆಡ್ಡಿ, ಪ್ರೊ| ಶಿವಶರಣಪ್ಪ ಬಿರಾದಾರ ಪಾಲ್ಗೊಂಡಿದ್ದರು.

Advertisement

ವಿವಿ ಸಮಾಜ ವಿಜ್ಞಾನ ನಿಕಾಯದ ಡೀನ್‌ ಪ್ರೊ| ಎಸ್‌.ಪಿ. ಮೇಲಿನಕೇರಿ ಸ್ವಾಗತಿಸಿದರು. ಉಪನ್ಯಾಸಕ ರಮೇಶ ಮಾಡಿಯಾಳ ನಿರೂಪಿಸಿದರು. ಶಿಕ್ಷಣ ನಿಕಾಯದ ಪ್ರೊ| ಸುರೇಖಾ ಕ್ಷೀರಸಾಗರ ವಂದಿಸಿದರು. ಶಿವಶರಣಪ್ಪ ಪೂಜಾರಿ, ಶಂಕರ ಹೂಗಾರ ಸಂಗೀತ ನಡೆಸಿಕೊಟ್ಟರು.

ಈ ಮೊದಲು ಸಾರೋಟದಲ್ಲಿ ಪ್ರಮುಖ ರಸ್ತೆಗಳ ಮೂಲಕ ವಿದ್ಯಾರ್ಥಿನಿಯರು ವಿದ್ಯಾ ಕುಂಬದ ಮೆರವಣಿಗೆ ನಡೆಸಿದರು. ವಿವಿಧ ಕಲಾವಿದರು ಕೈಗೊಂಡ ಸಾಂಸ್ಕೃತಿಕ ನೃತ್ಯ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಕುಲಪತಿಗಳು, ಶಾಸಕರು, ಪ್ರಾಧ್ಯಾಪಕರು ವಿವಿಧ ಪದವಿ ಕಾಲೇಜುಗಳ ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next