Advertisement

ಕುಡಿವ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಿ: ಡೀಸಿ

09:40 PM May 17, 2019 | Team Udayavani |

ದೇವನಹಳ್ಳಿ: ಪ್ರತಿ ಗ್ರಾಮದಲ್ಲಿ ಜಾನುವಾರುಗಳಿಗೂ ನೀರು ಒದಗಿಸುವ ಕೆಲಸವಾಗಬೇಕಿದ್ದು ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆಗಳನ್ನು ಪಟ್ಟಿಮಾಡಿ ಕೂಡಲೇ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕಿನಾದ್ಯಂತ ನೀರಿನ ಸಮಸ್ಯೆ ಇರುವ ಗ್ರಾಮಗಳು ಹಾಗೂ ಮೇವಿನ ಸಮಸ್ಯೆ ಕುರಿತಂತೆ ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ನೀರಿನ ಸಮಸ್ಯೆ ಇರುವ ಕಡೆ ಈಗಾಗಲೇ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಇರುವ ಕಡೆ ಕೂಡಲೇ ಟ್ಯಾಂಕರ್‌ನಲ್ಲಿ ನೀರನ್ನು ಸರಬರಾಜು ಮಾಡಬೇಕೆಂದರು.

ಕಂಟ್ರೋಲ್‌ ರೂಂ: ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕಂಟ್ರೋಲ್‌ರೂಂ ದೂ.080-29781021 ಇದ್ದು, ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9ಗಂಟೆವರೆಗೆ ಹಾಗೂ ರಾತ್ರಿ 9 ರಿಂದ ಬೆಳಗ್ಗೆ 9ರವರೆಗೆ ಮೂರು ಪಾಳಿಯಲ್ಲಿ ಕಂಟ್ರೋಲ್‌ ರೂಂ. ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ದೂರವಾಣಿ ಮೂಲಕ ಸ್ವೀಕರಿಸುವ ದೂರು ನಮೂದಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಹೇಳಿದರು.

ಕ್ರಮ ಕೈಗೊಳ್ಳಿ: ಒಂದು ಲೋಡ್‌ ಮೇವು ಬಂದಿದ್ದು, ಮೇವು ಸಮಸ್ಯೆ ಇರುವ ಕಡೆ ನೀಡಲು ನಿರ್ಧರಿಸಲಾಗಿದೆ. ಅಧಿಕಾರಿಗಳು ಮಳೆ ಬರುವವರೆಗೂ ನೀರಿನ ಸಮಸ್ಯೆ ಬಾರದಂತೆ ಅಗತ್ಯ ಕ್ರಮವನ್ನು ನಿಮ್ಮ ಹಂತದಲ್ಲೇ ತೆಗೆದುಕೊಳ್ಳಬೇಕೆಂದರು.

Advertisement

ನೋಟಿಸ್‌ ನೀಡಲಾಗಿದೆ: ನೀರಿನ ಬವಣೆ ಕಡಿಮೆ ಮಾಡಲು ಎಲ್ಲಾ ಪಿಡಿಒಗಳು ಮಳೆ ಕೊಯ್ಲು ಅಳವಡಿಸಿಕೊಳ್ಳಲು ಮನೆಗಳಲ್ಲಿ ಕಡ್ಡಾಯ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಕೈಗಾರಿಕೆ, ಚಿತ್ರಮಂದಿರ, ಕಲ್ಯಾಣ ಮಂಟಪ, ಕೋಳಿ ಫಾರಂ, ವಾಣಿಜ್ಯ ಕಟ್ಟಡ ವಿವಿಧ ಮಾಲಿಕರಿಗೆ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ನೋಟಿಸ್‌ ನೀಡಿ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಮ್ಮ ಗಮನಕ್ಕೆ ತನ್ನಿ: ಜಿಪಂ ಸಿಇಒ ಆರ್‌.ಲತಾ, ಬೋರ್‌ವೆಲ್‌ ಕೊರೆಸಿರುವ ಕಡೆ ಪೈಪ್‌ಲೈನ್‌ ಅಳವಡಿಸಿಕೊಳ್ಳದಿದ್ದರೆ ಕೂಡಲೇ ಅಳವಡಿಸಿಕೊಳ್ಳಲು ಅನುಮೋದನೆ ನೀಡುವಂತಾಗಬೇಕು. ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿ ಅನುಮೋದನೆ ಪಡೆದು ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿಯಲ್ಲಿ ಮಳೆ ಕೊಯ್ಲು ಅಳವಡಿಸಿಕೊಳ್ಳಲು ಅಂದಾಜು ತಯಾರಿಸಲಾಗುತ್ತಿದೆ. ಎಲ್ಲಾದರೂ ನೀರಿನ ಸಮಸ್ಯೆ ಕಂಡು ಬಂದರೇ ಕೂಡಲೇ ನಮ್ಮ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಇದೇ ವೇಳೆ ಉಪವಿಭಾಗಾಧಿಕಾರಿ ಮಂಜುನಾಥ್‌, ಜಿಪಂ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಶಿರಸ್ತೇದಾರ್‌ ಬಾಲಕೃಷ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಶನಿವಾರವೇ ನೀರಿನ ಬಿಲ್‌ ಸಲ್ಲಿಸಿ: ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಿಲ್‌ಗ‌ಳನ್ನು ಪ್ರತಿ ಶನಿವಾರ ಸಲ್ಲಿಸಬೇಕು. ಬಾಕಿ ಬಿಲ್‌ಗ‌ಳ ಮೊತ್ತ ನೀಡಲಾಗಿದ್ದು, ಕಚೇರಿಯಲ್ಲಿ ಯಾವುದೇ ಬಿಲ್‌ ಬಾಕಿ ಇಲ್ಲ. ಎಲ್ಲಾ ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್‌ ಅಳವಡಿಸಬೇಕು. ಟ್ಯಾಂಕರ್‌ ನೀರಿಗೆ 500ರೂ. ದರ ನಿಗದಿ ಮಾಡಲಾಗಿದೆ. ಜುಲೈ ಮೊದಲನೇ ವಾರದಲ್ಲಿ ಕುಡಿವ ನೀರು, ಮೇವಿನ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕರೀಗೌಡ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next