Advertisement

ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಿ

03:02 PM Mar 27, 2022 | Team Udayavani |

ಬೀದರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ, ಎದುರಿಸಲಿರುವ ಗ್ರಾಮಗಳು ಯಾವುವು ಎಂಬುದರ ಬಗ್ಗೆ ತಿಳಿಯಲು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಪಂ ಸಿಇಒ ಜಹೀರಾ ನಸೀಮ್‌ ಅವರು ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಜಂಟಿ ಸಭೆ ನಡೆಸಿ ಚರ್ಚಿಸಿದರು.

Advertisement

ಈ ವೇಳೆ ಮಾತನಾಡಿದ ಡಿಸಿ, ಬೇಸಿಗೆ ಶುರುವಾಗಿದ್ದು, ಕೆಲ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಬಹುದು. ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎನ್ನುವ ದೂರಿಗೆ ಯಾರು ಕೂಡ ಅವಕಾಶ ಕೊಡಬಾರದು. ಕಳೆದ ವರ್ಷದಂತೆ ನಿಯಮಾನುಸಾರ ಖಾಸಗಿ ಬೋರ್‌ವೆಲ್‌ಗ‌ಳನ್ನು ರೆಂಟ್‌ಗೆ ಪಡೆದುಕೊಳ್ಳಬೇಕು. ಬಿಲ್‌ ಪಾವತಿಗೆ ವಿಳಂಬ ಮಾಡಬಾರದು. ಪಿಡಿಒ ಮತ್ತು ಲ್ಯಾಂಡ್‌ ಒನರ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮತ್ತು ಇನ್ನೀತರ ಪ್ರಕ್ರಿಯೆಗಳನ್ನು ತೀವ್ರ ರೀತಿಯಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಬೇಸಿಗೆ ಬಂದಾಗ ಪ್ರತಿ ವರ್ಷ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಮೊದಲಾದ್ಯತೆಯ ಮೇರೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸುವ ಪ್ರಕ್ರಿಯೆ ಬೇಗನೆ ನಡೆಸಬೇಕು ಎಂದು ಸಿಇಒ ಸಲಹೆ ಮಾಡಿದರು.

ಔರಾದ್‌ ತಾಲೂಕಿನಲ್ಲಿ ಐದು ಗ್ರಾಮಗಳಲ್ಲಿ ಈಗಾಗಲೇ ಖಾಸಗಿ ಬೋರ್‌ವೆಲ್‌ಗ‌ಳಿಂದ ಬಾಡಿಗೆ ಆಧಾರದ ಮೇಲೆ ನೀರು ಪೂರೈಸಲಾಗುತ್ತಿದೆ. ಸಂಭವನೀಯ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳು 28 ಎಂದು ಗುರುತಿಸಲಾಗಿದೆ ಎಂದು ಔರಾದ ತಹಶೀಲ್ದಾರ್‌ ಸಭೆಗೆ ತಿಳಿಸಿದರು.

ಭಾಲ್ಕಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಈಗಾಗಲೇ ತೆರೆದ ಬಾವಿಯಿಂದ ನೀರು ಕೊಡಲಾಗುತ್ತಿದೆ. ಸಮೀಕ್ಷೆ ನಡೆಸಿದರೂ ಕೆಲವು ಕಡೆಗೆ ನೀರಿನ ಮೂಲಗಳು ಸಿಗುತ್ತಿಲ್ಲ. ಇನ್ನು ಕೆಲಕಡೆಗಳಲ್ಲಿ ಈಗಾಗಲೇ ಖಾಸಗಿ ಬೋರ್‌ವೆಲ್‌ ಗಳನ್ನು ಗುರುತಿಸಲಾಗಿದೆ ಎಂದು ಭಾಲ್ಕಿ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರು ಅವರು ಸಭೆಗೆ ವಿವರಿಸಿದರು. ಕಮಲನಗರ ತಾಲೂಕಿನಲ್ಲಿ ಐದು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

Advertisement

ಗ್ರಾಮವೊಂದರಲ್ಲಿ ಗ್ರಾಪಂನಿಂದಲೇ ಮೋಟರ್‌ ಕೂಡಿಸಿ ಬೋರ್‌ವೆಲ್‌ನಿಂದ ನೀರು ಪೂರೈಸಲಾಗುತ್ತಿದೆ. ಬೋರ್‌ವೆಲ್‌ ಕೊರೆಯಿಸಿದರೂ ಕೆಲ ಕಡೆಗಳಲ್ಲಿ ನೀರು ಸಿಗುತ್ತಿಲ್ಲ. ಕೆಲ ತಾಂಡಾಗಳಿಗೆ ಗ್ರಾಪಂ ವೆಚ್ಚದಿಂದಲೇ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ ತಿಳಿಸಿದರು.

ಬಸವಕಲ್ಯಾಣ ತಾಲೂಕಿನಲ್ಲಿ 16 ಗ್ರಾಮಗಳಲ್ಲಿ ನೀರಿಗೆ ತೊಂದರೆ ಆಗಬಹುದು ಎಂದು ಪಟ್ಟಿ ಮಾಡಲಾಗಿದೆ. ಅಂತಹ ಗ್ರಾಮಗಳಿಗೆ ಬೋರ್‌ವೆಲ್‌ ಮೂಲಕ ನೀರು ಪೂರೈಸಲು ಖಾಸಗಿ ಬೋರ್‌ವೆಲ್‌ ಗಳನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹುಮನಾಬಾದ್‌ ತಾಲೂಕಿನಲ್ಲಿ 8 ಮತ್ತು ಚಿಟಗುಪ್ಪ ತಾಲೂಕಿನಲ್ಲಿ 13 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಹುದು ಎಂದು ಗುರುತಿಸಲಾಗಿದೆ ಎಂದು ಆಯಾ ತಹಶೀಲ್ದಾರ್‌ ವಿವರಿಸಿದರು.

ಬೀದರ ತಾಲೂಕಿನಲ್ಲಿ ಯಾವುದೇ ಗ್ರಾಮಗಳಲ್ಲಿ ಇದುವರೆಗೆ ನೀರಿನ ಕೊರತೆ ಕಂಡು ಬಂದಿಲ್ಲ. ಕೆಲವು ಗ್ರಾಮಗಳ ಕೆಲವೊಂದು ವಾರ್ಡ್‌ಗಳಲ್ಲಿ ಮಾತ್ರ ನೀರಿನ ತೊಂದರೆಯಾಗಿದೆ ಎಂದು ಗೊತ್ತಾಗಿದ್ದು, ಅಂತಹ ಕಡೆಗೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಂಜಿನಿಯರ್‌ ತಿಳಿಸಿದರು.

ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಈಗ ಮೊದಲು ಕೊಳವೆಬಾವಿ ಬಾಡಿಗೆ ಆಧಾರದ ಮೇಲೆ ಪಡೆಯುವ ಬಗ್ಗೆ, ಮುಂದಿನ ಹಂತದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದರ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಅಪರ ಡಿಸಿ ಶಿವಕುಮಾರ ಶೀಲವಂತ, ಐಎಎಸ್‌ ಪ್ರೋಬೇಷನರಿ ಅಧಿಕಾರಿ ಕೀರ್ತನಾ, ಸಹಾಯಕ ಆಯುಕ್ತರಾದ ನಯೀಮ್‌ ಮೋಮಿನ್‌, ರಮೇಶ ಕೋಲಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next