Advertisement

ಗ್ರಂಥಾಲಯ-ಮ್ಯೂಸಿಯಂ ಸ್ಥಾಪನೆಗೆ ಕ್ರಮ ವಹಿಸಿ

04:53 PM Mar 21, 2022 | Team Udayavani |

ಹಾವೇರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ವಿ.ಕೃ. ಗೋಕಾಕ ನೆನಪಿನಲ್ಲಿ ಸವಣೂರಲ್ಲಿ ನಿರ್ಮಿಸಿರುವ ಡಾ| ವಿ.ಕೃ. ಗೋಕಾಕ ಸ್ಮಾರಕ ಭವನದಲ್ಲಿ ನಿರಂತರ ಕಾರ್ಯಚಟುವಟಿಕೆ ನಡೆಸುವಂತಾಗಬೇಕು. ಸುಸಜ್ಜಿತ ಗ್ರಂಥಾಲಯ ಹಾಗೂ ವಿ.ಕೃ. ಗೋಕಾಕ ಅವರಿಗೆ ಸಂಬಂಧಿಸಿದ ವಸ್ತುಗಳು ಹಾಗೂ ಛಾಯಾಚಿತ್ರಗಳನ್ನು ಒಳಗೊಂಡ ಮ್ಯೂಸಿಯಂ ಸ್ಥಾಪನೆ ಕುರಿತಂತೆ ಶೀಘ್ರ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ| ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.

ಗೋಕಾಕ ಸಭಾಂಗಣದ ಆವರಣದಲ್ಲಿ ಸ್ವತ್ಛತೆ ಹಾಗೂ ಮುಂಭಾಗದಲ್ಲಿ ಕಾರಂಜಿ ನಿರ್ಮಾಣ ಕುರಿತಂತೆ ತ್ವರಿತವಾಗಿ ನೀಲನಕ್ಷೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿಗೆ ಸೂಚಿಸಿದರು.

ಡಾ| ವಿ.ಕೃ. ಗೋಕಾಕ ವಸ್ತು ಸಂಗ್ರಾಲಯ ಹಾಗೂ ಗ್ರಂಥಾಲಯಕ್ಕೆ ಗೋಕಾಕರ ಮಗ ತಮ್ಮಲ್ಲಿ ಸಂಗ್ರಹವಿರುವ ವಸ್ತುಗಳು ಹಾಗೂ ಪುಸ್ತಕಗಳನ್ನು ನೀಡಲು ಮುಂದೆ ಬಂದಿದ್ದಾರೆ. ಗ್ರಂಥಾಲಯಕ್ಕೆ ಅಗತ್ಯ ಪೀಠೊಪಕರಣಗಳ ಖರೀದಿ ಹಾಗೂ ಸಭಾಭವನದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಶೀಘ್ರದಲ್ಲೇ ಕಾರ್ಯ ಚಟುವಟಿಕೆ ಆರಂಭಿಸುವ ಕುರಿತಂತೆ ಕ್ರಮ ವಹಿಸಬೇಕು. ಏಪ್ರಿಲ್‌ ಮೊದಲ ವಾರದಲ್ಲಿ ಸವಣೂರಿನ ಗೋಕಾಕ ಸಭಾಂಗಣದಲ್ಲಿ ಟ್ರಸ್ಟ್‌ ಸಭೆ ಕರೆದು ಅಂತಿಮಗೊಳಿಸುವಂತೆ ಸೂಚನೆ ನೀಡಿದರು.

ನೀಲನಕ್ಷೆ: ನಾಡೋಜ ಡಾ| ಪಾಟೀಲ ಪುಟ್ಟಪ್ಪನವರ ಸಮಾಧಿ  ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಕುರಿತಂತೆ ತ್ವರಿತವಾಗಿ ಜಮೀನಿನ ನೋಂದಣಿ ಹಾಗೂ ಸ್ಮಾರಕದ ನೀಲನಕ್ಷೆ ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

Advertisement

ಟ್ರಸ್ಟ್‌ನ ಸದಸ್ಯರಾದ ಡಾ| ರಮಾಕಾಂತ ಜೋಶಿ, ಜಿ.ಎಂ. ಹೆಗಡೆ, ಸತೀಶ ಕುಲಕರ್ಣಿ ಮಾತನಾಡಿ, ಆ.9ರಂದು ಗೋಕಾಕರ ಜನ್ಮ ದಿನ ಧಾರವಾಡದಲ್ಲಿ ಆಯೋಜಿಸಬೇಕು. ಸವಣೂರಿನಲ್ಲಿ ನಿರ್ಮಾಣ ಮಾಡಿರುವ ಡಾ| ವಿ.ಕೃ. ಗೋಕಾಕ ಸಭಾಂಗಣಕ್ಕೆ ಜ್ಞಾನಪೀಠ ಪುರಸ್ಕೃತ ಡಾ| ವಿ.ಕೃ. ಗೋಕಾಕ ಭವನ ಎಂದು ನಾಮಕರಣ ಮಾಡಬೇಕು. ಗೋಕಾಕರ ಭವನದಲ್ಲಿ ವಸ್ತು ಸಂಗ್ರಹಾಲಯ ಅಭಿವೃದ್ಧಿ, ಗ್ರಂಥಾಲಯ ಸ್ಥಾಪನೆ, ಗೋಕಾಕರ ಚಿತ್ರಸಂಪುಟ ಸಾರ್ವಜನಿಕ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಶ್ರದ್ಧಾಂಜಲಿ: ಡಾ| ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯರಾಗಿದ್ದ ನಾಡೋಜ ಡಾ| ಪಾಟೀಲ ಪುಟ್ಟಪ್ಪ, ಎಂ.ಪಿ.ಪಾಟೀಲ, ಚನ್ನವೀರ ಕಣವಿ ಅಗಲಿಕೆಗೆ ಸಭೆಯ ಆರಂಭದಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಜಿಪಂ ಸಿಇಒ ಮಹಮ್ಮದ್‌ ರೋಷನ್‌, ಸವಣೂರು ಉಪ ವಿಭಾಗಾಧಿ ಕಾರಿ ಅನ್ನಪೂರ್ಣ ಮುದಕಮ್ಮನವರ, ಸವಣೂರು ಪುರಸಭೆ ಅಧ್ಯಕ್ಷೆ ಶೈಲಾ ಎಚ್‌. ಮುದೇನಗೌಡರ, ಡಿವೈಎಸ್ಪಿ ಶಂಕರ ಮಾರಿಹಾಳ, ಟ್ರಸ್ಟ್‌ನ ಸದಸ್ಯರಾದ ಮೈಲಾರಪ್ಪ ತಳ್ಳಿಹಳ್ಳಿ, ಮಂಜುಳಾ ರಾಶೀನಕರ, ಚಂದ್ರಗೌಡ ಪಾಟೀಲ, ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಶಶಿಕಲಾ ಹುಡೇದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next