Advertisement

ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ

10:18 PM Apr 29, 2019 | Lakshmi GovindaRaju |

ಮೈಸೂರು: ಬೇಸಿಗೆ ತೀವ್ರಗೊಂಡಂತೆ ಜಿಲ್ಲೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಬೇರೆ-ಬೇರೆ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ, ಸಮಸ್ಯೆ ಉಲ್ಬಣಗೊಳ್ಳದಂತೆ ಎಚ್ಚರಿಕೆವಹಿಸಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ ತಾಕೀತು ಮಾಡಿದರು.

Advertisement

ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ, ಮೈಸೂರು ಜಿಲ್ಲೆಯಲ್ಲಿನ ಬರ ಮತ್ತು ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ಪರಿಶೀಲನಾ ಸಭೆ ನಡೆಸಿ ಅವರು ಮಾಹಿತಿ ಪಡೆದರು.

ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ ಮತ್ತು ಕೆ.ಆರ್‌.ನಗರ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಈ ಎರಡೂ ತಾಲೂಕುಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ, ಹೀಗಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ ಎಂದರು.

ನರೇಗಾ ಕೈಗೆತ್ತಿಕೊಳ್ಳಿ: ಮೈಸೂರು ನಗರ ಮತ್ತು ಜಿಲ್ಲೆಯ ಭಾಗಶಃ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಬೇಸಿಗೆ ತೀವ್ರಗೊಳ್ಳುವ ದಿನಗಳಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮಧ್ಯಂತರ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಜತೆಗೆ ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವ ಮೂಲಕ ಜನ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ತುಸು ವ್ಯತ್ಯಯ: ಮೈಸೂರು ನಗರದ ಜಲಮೂಲಗಳಾದ ಕಾವೇರಿ ಮತ್ತು ಕಬಿನಿ ಜಲಾಶಯಗಳಿಂದ ನೀರೆತ್ತಿ ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಮಾರ್ಗದಲ್ಲಿ ಬರುವ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸಲಾಗುತ್ತಿದೆ.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬಡಾವಣೆಗಳಿಗೂ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದರಿಂದಾಗಿ ಮೈಸೂರು ನಗರಕ್ಕೆ ನೀರು ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯವಾಗುತ್ತಿದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಹೊರವಲಯದ ಬಡಾವಣೆಗಳಲ್ಲಿ ನೀರು ಸರಬರಾಜಿಗೆ ವ್ಯತ್ಯಯವಾಗುತ್ತಿದ್ದು,

ಈ ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ. ಆದರೆ, ಕೆಲ ಪ್ರದೇಶಗಳಿಗೆ 2-3 ದಿನಗಳಿಗೊಮ್ಮೆ ನೀರು ಕೊಡಲಾಗುತ್ತಿದೆ ಎಂದು ನಗರಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ ಮಾಹಿತಿ ನೀಡಿದರು.

ರೀಡ್ರಿಲ್‌: ಮೈಸೂರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಲಿಂಗರಾಜಯ್ಯ ಮಾತನಾಡಿ, ಹಿನಕಲ್‌, ದಟ್ಟಗಳ್ಳಿ, ತಾವರೆಕಟ್ಟೆ ಮೊದಲಾದ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬತ್ತಿ ಹೋಗಿರುವ ಕೊಳವೆಬಾವಿಗಳನ್ನು ರೀ ಡ್ರಿಲ್‌ ಮಾಡಿಸಿ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಯೋಜನೆ: ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿ ಮಾತನಾಡಿ, ಕಬಿನಿ ಯೋಜನೆಯಿಂದ ಮೊದಲು 32 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ರೂಪಿಸಲಾಗಿತ್ತು. ಈಗ ಅದನ್ನು 42 ಗ್ರಾಮಗಳಿಗೆ ವಿಸ್ತರಿಸಲು ತಳೂರು -ಬಿದರಗೂಡು ಕಡೆಯಿಂದ ಪೈಪ್‌ಲೇನ್‌ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಮೈಸೂರು ನಗರಕ್ಕೆ ಕಬಿನಿಯಿಂದ 6.5 ಎಂಎಲ್‌ಡಿ ನೀರು ಸಿಗಲಿದ್ದು, ಬೀರಿಹುಂಡಿ ಮೊದಲಾದ ಹಳ್ಳಿಗಳ ನೀರಿನ ಸಮಸ್ಯೆ ನೀಗಲಿದೆ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ, ಮುಡಾ ಅಧೀಕ್ಷಕ ಇಂಜಿನಿಯರ್‌ ಸುರೇಶಬಾಬು, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರಸ್ವಾಮಿ ಸೇರಿದಂತೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಮಳೆ ಕೊರತೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 815.3 ಮಿ.ಮೀ ಮಳೆಯಾಗಬೇಕಾಗಿದೆ. ಏಪ್ರಿಲ್‌ 24 ರವರೆಗೆ 69.5 ಮಿ.ಮೀ. ಮಳೆಯಾಗಬೇಕಿತ್ತಾದರೂ 57.5 ಮಿ.ಮೀ ಮಾತ್ರ ಮಳೆಯಾಗಿದ್ದು, 11.6 ಮಿ.ಮೀ ಮಳೆ ಕೊರತೆಯಾಗಿದೆ.

ಮುಂಗಾರು ಪೂರ್ವ ಹಂಗಾಮಿನ ಬಿತ್ತನೆಗೆ ಭತ್ತ ಸೇರಿದಂತೆ ವಿವಿಧ ಏಕದಳ, ದ್ವಿದಳ ಧಾನ್ಯಗಳ 37147 ಮೆಟ್ರಿಕ್‌ ಟನ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, ಈಗ 971 ಮೆಟ್ರಿಕ್‌ ಟನ್‌ ಬಿತ್ತನೆ ಬೀಜಗಳನ್ನು ತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ ಮಾಹಿತಿ ನೀಡಿದರು.

ಪ್ರತಿ ತಾಲೂಕಿನ ಟಾಸ್ಕ್ಫೋರ್ಸ್‌ಗೆ ತಲಾ 25 ಲಕ್ಷದಂತೆ 1.75 ಕೋಟಿ ಅನುದಾನ ಬಿಡುಗಡೆಯಾಗಿದೆ. ಹಾಗೆಯೇ ಬರಪೀಡಿತ ತಾಲೂಕಿಗೆ ಹೆಚ್ಚುವರಿಯಾಗಿ ತಲಾ 25 ಲಕ್ಷ ಕೊಡಲಾಗಿದೆ ಎಂದು ತಿಳಿಸಿದರು.
-ಕೆ.ಜ್ಯೋತಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next