Advertisement

ಕ್ರಮಕೈಗೊಳ್ಳಿ, ಇಲ್ಲವೇ ಹುದ್ದೆ ಬಿಟ್ಟು ಹೋಗಿ

12:17 PM Nov 03, 2018 | Team Udayavani |

ಬೆಂಗಳೂರು: ನಗರದ ಬಹುಪಾಲು ತ್ಯಾಜ್ಯ ವಿಲೇವಾರಿಯಾಗುತ್ತಿರುವ ಬೆಳ್ಳಹಳ್ಳಿ ಕ್ವಾರಿ ಮುಂದಿನ ಮೂರು ತಿಂಗಳಲ್ಲಿ ಭರ್ತಿಯಾಗಲಿದ್ದು, ನಗರದಲ್ಲಿ ತ್ಯಾಜ್ಯ ಸಮಸ್ಯೆ ಕಾಡುವ ಆತಂಕ ಎದುರಾಗಲಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಉಪಮುಖ್ಯಮಂತ್ರಿಗಳು “ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಕ್ರಮಗಳಿಗೆ ಮುಂದಾಗಿ, ಇಲ್ಲವೆ ಹುದ್ದೆಗಳನ್ನು ಬಿಟ್ಟು ಹೋಗಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Advertisement

ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ ಸೂಚನೆ ಮೇರೆಗೆ ಶುಕ್ರವಾರ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ತ್ಯಾಜ್ಯ ವಿಲೇವಾರಿ ವಿಧಾನಗಳು, ಪಾಲಿಕೆಯ ಮುಂದಿರುವ ಪರ್ಯಾಯ ಮಾರ್ಗಗಳು, ಸದ್ಯ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, “ನಿಮ್ಮ ಕೈಯಲ್ಲಿ ಆಗದಿದ್ದರೆ ಹುದ್ದೆ ಬಿಟ್ಟು ಹೋಗಿ’ ಎಂದು ಖಾರವಾಗಿಯೇ ಹೇಳಿದ್ದಾರೆ. 

ಇದರೊಂದಿಗೆ ಯೋಜನಾ ವಿಭಾಗದಲ್ಲಿನ 13 ಸಹಾಯಕ ಎಂಜಿನಿಯರ್‌ಗಳನ್ನು ಕೂಡಲೇ ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೆ ವರ್ಗಾಹಿಸುವಂತೆ ಆಯುಕ್ತರಿಗೆ ಸೂಚಿಸಿದ ಅವರು, ಒಂದೊಮ್ಮೆ ಅವರು ಹೋಗದಿದ್ದರೆ ಅವರನ್ನು ಮಾತೃ ಇಲಾಖೆಗೆ ವಾಪಾಸ್‌ ಕಳುಹಿಸಿ. ಅವರ ಬದಲಿಗೆ ಬೇರೆಯವನ್ನು ಕರೆಸಿಕೊಂಡು ಕೆಲಸ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. 

ನಂತರ ಸುದ್ದಿಗೋಷ್ಠಿ ನಡೆಸಿದ ಪರಮೇಶ್ವರ್‌, ಬೆಳ್ಳಹಳ್ಳಿ ಕ್ವಾರಿ 3 ತಿಂಗಳಲ್ಲಿ ಭರ್ತಿಯಾಗಲಿದೆ. ಹೀಗಾಗಿ ತ್ಯಾಜ್ಯ ಸಮಸ್ಯೆ ಎದುರಾಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೈಕೋರ್ಟ್‌ ನೀಡಿರುವ ಸೂಚನೆಗಳಿಂದ ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ದೇಶವೇ ಬೆಂಗಳೂರಿನೆಡೆಗೆ ನೋಡುವಂತಾಗಿದೆ. ಹೈಕೋರ್ಟ್‌ ನಿರ್ದೇಶನವನ್ನು ನಾನು ಸ್ವಾಗತಿಸುತ್ತೇನೆ ಎಂದರು. 

ಬಿಬಿಎಂಪಿಯಲ್ಲಿ ತ್ಯಾಜ್ಯ ನಿರ್ವಹಣೆ ಈ ಹಿಂದೆ ಹಿಡಿತಕ್ಕೆ ಸಿಕ್ಕಿರಲಿಲ್ಲ. ಆದರೀಗ ಪಾಲಿಕೆ ಹಿಡಿತಕ್ಕೆ ತೆಗೆದುಕೊಂಡಿದ್ದು, ಸಮಸ್ಯೆ ನಿವಾಸಿರುವ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ 1.30 ಕೋಟಿ ಜನರು ವಾಸಿಸುತ್ತಿದ್ದು, ನಿತ್ಯ 20-30 ಲಕ್ಷ ಜನರು ನಗರಕ್ಕೆ ಬಂದು ಹೋಗುತ್ತಾರೆ. ಒಂದೇ ಒಂದು ದಿನ ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ವ್ಯತ್ಯಯವಾದರೂ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು. 

Advertisement

ಮಾರ್ಷಲ್‌ ನೇಮಕ, ದಂಡ ಹೆಚ್ಚಳ: ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದು ಬ್ಲಾಕ್‌ಸ್ಪಾಟ್‌ ಸೃಷ್ಟಿಸುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ವಾರ್ಡ್‌ ಒಬ್ಬರಂತೆ ಮಾರ್ಷಲ್‌ ನೇಮಿಸಿಕೊಳ್ಳಲಾಗುವುದು. ಜತೆಗೆ ದಂಡದ ಮೊತ್ತವನ್ನು 100 ರೂ.ಗಳಿಂದ 500 ರೂ.ಗೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿದ್ದು, ಶೀಘ್ರದಲ್ಲಿಯೇ ಅನುಮೋದನೆ ನೀಡಲಾಗುವುದು. ಜತೆಗೆ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಉದ್ದೇಶಿಸಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಹಿರಿಯ ಆರೋಗ್ಯ ಪರಿವೀಕ್ಷಕರು, ಪ್ರತಿವಾರ್ಡ್‌ಗೆ ಇಬ್ಬರಿಂದ ಮೂವರಂತೆ ಸ್ಯಾನಿಟಿರಿ ದಫೇದಾರ್‌ಗಳನ್ನು ನೇಮಿಸಲಾಗುವುದು ಎಂದರು. 

ಟೆರ್ರಾಫಾರ್ಮ್ಗೆ ಮತ್ತೆ ಕಸ: ದೊಡ್ಡಬಳ್ಳಾಪುರದ ಬಳಿಯ ಟೆರ್ರಾಫಾರ್ಮ್ ಘಟಕಕ್ಕೆ ಸ್ಥಳೀಯರ ವಿರೋಧದಿಂದ 2014-15ರಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಬೆಳ್ಳಹಳ್ಳಿ ಕ್ವಾರಿ ಭರ್ತಿಯಾದ ಬಳಿಕ ತ್ಯಾಜ್ಯ ಅಲ್ಲಿಗೆ ಕಳುಹಿಸಲು ಸರ್ಕಾರ ಚಿಂತನೆ ನಡೆಸಿದೆ. ಅಲ್ಲಿರುವ 150 ಎಕರೆಯಲ್ಲಿ ಆಧುನಿಕ ತಂತ್ರಜ್ಞಾನದ ಯಂತ್ರಗಳನು ಬಳಸಿ ತ್ಯಾಜ್ಯ ವಿಲೇವಾರಿಗೆ ಮಾಡಲಾಗುವುದು ಎಂದ ಪರಮೇಶ್ವರ್‌, ಬಿಡದಿ ಬಳಿ 15 ಎಕರೆ ಜಾಗದಲ್ಲಿ ಬೆಸ್ಕಾಂ ಜತೆ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನಾ ಘಟಕ ನಿರ್ಮಾಣ ಶೀಘ್ರದಲ್ಲಿಯೆ ಆರಂಭವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next