ನವದೆಹಲಿ/ಇಂಫಾಲ್: ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ನಡೆದ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಕೂಡಲೇ ಗಲಭೆ ಸಂತ್ರಸ್ತರಿಗೆ ಭದ್ರತೆ, ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೋಮವಾರ ಸೂಚನೆ ನೀಡಿದೆ.
ಸದ್ಯ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಆಹಾರ, ಪಡಿತರ, ವೈದ್ಯಕೀಯ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು, ಸೇವೆಗಳನ್ನು ಒದಗಿಸಬೇಕು. ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಪರಿಸ್ಥಿತಿ ಶಾಂತ:ಇದೇ ವೇಳೆ, ಗಲಭೆಪೀಡಿತ ಮಣಿಪುರದಲ್ಲಿ ಸೋಮವಾರ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸೋಮವಾರವೂ ಕೆಲವು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಿದ ಕಾರಣ, ಜನರು ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ.
ಸ್ವಂತ ಹಣದಿಂದ ರಕ್ಷಣೆ:ಮಣಿಪುರದಲ್ಲಿ ಸಿಲುಕಿಕೊಂಡಿದ್ದ ಐವರು ವಿದ್ಯಾರ್ಥಿಗಳನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖೀಂದರ್ ಸಿಂಗ್ ಸುಖು ಅವರು ಸ್ವಂತ ಖರ್ಚಿನಿಂದ ಹುಟ್ಟೂರಿಗೆ ಕರೆತಂದಿದ್ದಾರೆ. ವಿದ್ಯಾರ್ಥಿಗಳ ಸ್ಥಳಾಂತರಕ್ಕೆ 60 ಸಾವಿರ ರೂ.ಗಳನ್ನು ಸಿಎಂ ಸುಖು ಖರ್ಚು ಮಾಡಿದ್ದಾರೆ.
ಈ ನಡುವೆ, ಮಣಿಪುರ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಬಂಗಾಳದಲ್ಲಿ ಏನಾದರೂ ಆದರೆ, ಕೇಂದ್ರ ಸರ್ಕಾರದ ನೂರಾರು ತಂಡಗಳು ರಾಜ್ಯಕ್ಕೆ ಧಾವಿಸಿ, ನಮ್ಮ ಸರ್ಕಾರವನ್ನು ದೂಷಿಸುತ್ತವೆ. ಆದರೆ, ಬಿಜೆಪಿ ಆಡಳಿತದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಯಾರೊಬ್ಬರದ್ದೂ ಸುಳಿವಿಲ್ಲ. ಸಾವಿನ ಸಂಖ್ಯೆಯನ್ನೂ ಸರ್ಕಾರ ಮುಚ್ಚಿಡುತ್ತಿದೆ’ ಎಂದು ಆರೋಪಿಸಿದ್ದಾರೆ.