Advertisement

ಸಮಿತಿ ಶಿಫಾರಸಿನಂತೆ ಕ್ರಮ ಕೈಗೊಳ್ಳಿ

10:41 AM Nov 23, 2017 | |

ಸುವರ್ಣಸೌಧ, ಬೆಳಗಾವಿ: ರಾಜಧಾನಿ ಬೆಂಗಳೂರು ಸುತ್ತಮುತ್ತ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಬಗ್ಗೆ ಸದನ ಸಮಿತಿಯು ಸಮಗ್ರ ವರದಿ ನೀಡಿದ್ದು, ಸಮಿತಿಯ ಶಿಫಾರಸು ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಸದನ ಸಮಿತಿ ಅಧ್ಯಕ್ಷರೂ ಆಗಿರುವ ಸ್ಪೀಕರ್‌ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

Advertisement

ಸುವರ್ಣಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಮುಂದಿನದು ಸರ್ಕಾರಕ್ಕೆ ಬಿಟ್ಟದ್ದು. ಆದರೆ, ಕಾಲಮಿತಿಯಲ್ಲಿ ಈ ಬಗ್ಗೆ ಕ್ರಮ ಕೈಗೊಂಡಾಗ ಮಾತ್ರ ಜಲಮೂಲಗಳ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.

ಸದನ ಸಮಿತಿಯು ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಮಹತ್ವದ ವರದಿ ನೀಡಿದೆ. ಸಮಿತಿಯ ಶಿಫಾರಸು ಪ್ರಕಾರ ಕ್ರಮ ಕೈಗೊಂಡಾದ ಮಾತ್ರ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಸರ್ಕಾರಿ ಸಂಸ್ಥೆಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ 2194.11 ಎಕರೆ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 1062.36 ಎಕರೆ ಒತ್ತುವರಿ ಮಾಡಿವೆ. ಅದೇ ರೀತಿ ಖಾಸಗಿ ವ್ಯಕ್ತಿಗಳು ನಗರ ಜಿಲ್ಲೆಯಲ್ಲಿ 2340.36 ಎಕರೆ, ಗ್ರಾಮೀಣ ಭಾಗದಲ್ಲಿ 5189.24 ಎಕರೆ ಜಮೀನು ಒತ್ತುವರಿ ಮಾಡಿದ್ದಾರೆ. 66289.38 ಎಕರೆಯಷ್ಟು ಕೆರೆ ಜಾಗ, 158 ಕೆರೆಗಳು ಸಂಪೂರ್ಣವಾಗಿ ಒತ್ತುವರಿಯಿಂದ ಮುಕ್ತವಾಗಿವೆ ಎಂದು ವಿವರಿಸಿದರು.

ಬಿಡಿಎ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿದೆ. ನಿವೇಶನಗಳನ್ನೂ ಹಂಚಿಕೆ ಮಾಡಿ ಅಲ್ಲಿ ಮನೆ ಕಟ್ಟಲಾಗಿದೆ. ಈಗ ಅವರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಹೀಗಾಗಿ, ಸೂಕ್ತ ಕಾನೂನು ತಿದ್ದುಪಡಿ ಮಾಡಲು ಶಿಫಾರಸು ಮಾಡಲಾಗಿದೆ. ಖಾಸಗಿ ವ್ಯಕ್ತಿಗಳು ಮಾಡಿರುವ ಒತ್ತುವರಿ ವಿಚಾರದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಮಾನವೀಯತೆ ನೆಲೆಯಿಂದ ನಿರ್ಜೀವ ಕೆರೆ ಜಾಗದಲ್ಲಿ ಇರುವವರಿಗೆ ದಂಡ ವಿಧಿಸಿ ಸಕ್ರಮಗೊಳಿಸಲು ಸಾಧ್ಯವಿದ್ದರೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ನಗರದಲ್ಲಿ ಹಲವು ಖಾಸಗಿ ಸಂಸ್ಥೆಗಳು ಕೆರೆ, ಕಾಲುವೆ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡಿವೆ. ಸರ್ಕಾರದ ವಶಕ್ಕೆ ಪಡೆಯಲು ಸ್ಪಷ್ಟವಾಗಿ ತಿಳಿಸಲಾಗಿದೆ. ದೇವಾಲಯಗಳಿದ್ದರೆ ಅದನ್ನು ಮುಜರಾಯಿ ಇಲಾಖೆಗೆ ವಹಿಸಲು ತಿಳಿಸಲಾಗಿದೆ. ಒಂದೊಮ್ಮೆ ಕೆರೆ ಪುನಶ್ಚೇತನ ಗೊಳಿಸಬಹುದು ಎಂದು ಗುರುತಿಸಲಾದ ಜಾಗದಲ್ಲಿ ದೇವಾಲಯ ಇದ್ದರೆ ಬೇರೆಡೆ ಸ್ಥಳಾಂತರಕ್ಕೂ ಸೂಚಿಸಲಾಗಿದೆ ಎಂದು ಹೇಳಿದರು. 

Advertisement

ಸರ್ಕಾರದ ಸಂಸ್ಥೆಗಳು ಮೂಲ ಸೌಕರ್ಯ ಒದಗಿಸಲು ಕೆಲವು ಕಡೆ ಒತ್ತುವರಿ ಮಾಡಿದ್ದರೆ, ಸ್ಮಶಾನ ಇದ್ದು, ಸಾರ್ವಜನಿಕರು ಬಳಕೆ ಮಾಡುತ್ತಿದ್ದರೆ ಅಂತಹ ಕಡೆ ಜನರ ಹಿತಾಸಕ್ತಿ ಗಮನಿಸಿ ಕ್ರಮ ಕೈಗೊಳ್ಳಲು ವರದಿಯಲ್ಲಿ ಹೇಳಲಾಗಿದೆ. ಇದು ಯಾರನ್ನೂ ಬಚಾವ್‌ ಮಾಡುವ ಉದ್ದೇಶವಲ್ಲ ಎಂದು ತಿಳಿಸಿದರು.

300 ಜನ ಭೂ ಮಾಪಕರನ್ನು ನೇಮಿಸಿ ನೋಡಲ್‌ ಅಧಿಕಾರಿ ಸಹಕಾರದೊಂದಿಗೆ ಕೆರೆ ಹಾಗೂ ರಾಜಾಕಾಲುವೆ ಬಗ್ಗೆ ಅತ್ಯುತ್ತಮ ವರದಿ ಸಿದ್ಧಪಡಿಸಲಾಗಿದೆ. ಇದು ಒಂದು ರೀತಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಜಲಮೂಲಗಳ ಇತಿಹಾಸ ಸಂಪುಟವೂ ಹೌದು ಎಂದು ಹೇಳಿದರು. 

ಯಾರೇ ಒತ್ತುವರಿ ಮಾಡಿದರೂ ಬಿಡುವಂತಿಲ್ಲ: ನಟ ದರ್ಶನ್‌ ಸೇರಿದಂತೆ ಯಾರೇ ರಾಜಕಾಲುವೆ ಜಾಗದಲ್ಲಿ ಮನೆ ನಿರ್ಮಿಸಿದ್ದರೂ ಅಥವಾ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದ್ದರೂ ಅದನ್ನು ತೆರವುಗೊಳಿಸಬೇಕಾಗುತ್ತದೆ. ನಮ್ಮ ವರದಿಯಲ್ಲೂ ಅದನ್ನೇ ಹೇಳಲಾಗಿದೆ. ನಾವು ಯಾರೊಬ್ಬರ ಬಗ್ಗೆಯೂ ವೈಯಕ್ತಿವಾಗಿ ಉಲ್ಲೇಖೀಸಿಲ್ಲ. ಹಾಗೆಂದ ಮಾತ್ರಕ್ಕೆ ಯಾರಧ್ದೋ ಪ್ರಭಾವಕ್ಕೆ ಮಣಿದಿದ್ದೇವೆ ಎಂದಲ್ಲ. ಕೆರೆ ಅಂಗಳ ಒತ್ತುವರಿ ಪುನಶ್ಚೇತನಗೊಳಿಸಲು ಸಾಧ್ಯವಿದ್ದರೆ ಅಲ್ಲೂ ತೆರವುಗೊಳಿಸಿ ಎಂದು ಹೇಳಿದ್ದೇವೆ. ರಾಜಕಾಲುವೆ ವಿಚಾರದಲ್ಲಿ ಯಾವುದೇ ವಿನಾಯಿತಿ ಕೊಟ್ಟಿಲ್ಲ ಎಂದುಕೋಳಿವಾಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next